ವೀರಾಜಪೇಟೆ, ಮಾ. 24: ಕೊರೊನಾ ವೈರಸ್ ಭೀತಿಯಿಂದ ವೀರಾಜಪೇಟೆ ಪಟ್ಟಣದಲ್ಲಿ ಸ್ತಬ್ಧತೆ ಇಂದು ಮುಂದುವರೆದಿದ್ದು, ಇಂದು ಬೆಳಗ್ಗಿನಿಂದ ಅಪರಾಹ್ನ 12 ಗಂಟೆಯವರೆಗೆ ಮುಖ್ಯ ಬೀದಿಗಳು ಬಿಕೋ ಎನ್ನುತ್ತಿದ್ದವು. ಯಾವುದೇ ಬಸ್ಸು, ಆಟೋ ರಿಕ್ಷಾಗಳು ಇತರ ವಾಹನಗಳು ಸಂಚರಿಸಲಿಲ್ಲ. ಕಫ್ರ್ಯೂನಲ್ಲಿ ಅಪರಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಮನೆಯಿಂದ ಹೊರಗೆ ಬಂದ ನಿವಾಸಿಗಳು ತರಾತುರಿಯಲ್ಲಿ ದಿನಸಿ, ತರಕಾರಿ ಸಾಮಗ್ರಿಗಳನ್ನು ಖರೀದಿಸಿದರು.
ಪಟ್ಟಣದಲ್ಲಿ ಬೆಳಗ್ಗಿನಿಂದಲೇ ಜನತಾ ಕಪ್ರ್ಯೂ ಮುಂದುವರೆದಿದ್ದು, ಪೊಲೀಸರಿಂದ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ವಾಹನಗಳಲ್ಲಿ ಸಂಚರಿಸುತ್ತಿರುವವರ ಮೇಲೆ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ಲಘು ಲಾಠಿ ಪ್ರಹಾರ ಮಾಡಿ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಹಿತ ಸಮುಚ್ಚಯ ಠಾಣೆಗೆ ಕಳುಹಿಸಿ ಎಚ್ಚರಿಕೆ ನೀಡಿ ನಂತರ ಬಿಡುಗಡೆಗೊಳಿಸಿದರು.
ಖಾಸಗಿ ಬಸ್ ನಿಲ್ದಾಣದ ಬಳಿ ತಹಶೀಲ್ದಾರ್ ನಂದೀಶ್ ಪೊಲೀಸ ರೊಂದಿಗೆ ಕೆಲವು ವಾಹನಗಳನ್ನು ತಪಾಸಣೆ ನಡೆಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರು ತಮ್ಮ ಸಿಬ್ಬಂದಿಗ ಳೊಂದಿಗೆ ಪಟ್ಟಣದ ವಿವಿಧೆಡೆ ಸಂಚರಿಸಿ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರಲ್ಲದೆ ಚರಂಡಿ, ರಸ್ತೆ ಬದಿಯ ಕುರುಚಲು ಗಿಡಗಳಿಗೆ ಔಷಧಿ ಸಿಂಪಡಿಸುವ ಕಾರ್ಯ ಮುಂದುವರೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್ ನಂದೀಶ್ ವೀರಾಜಪೇಟೆಯಿಂದ ಕುಟ್ಟದವರೆಗೆ ಇಂದು ಪ್ರವಾಸ ಕೈಗೊಂಡಿದ್ದು, ಎಲ್ಲಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕೊಂಡಂಗೇರಿಯಲ್ಲಿ 75 ಕುಟುಂಬ ಗಳನ್ನು ಕ್ವಾರಂಟೈನರ್ನಲ್ಲಿರಿಸಿ ನಿಗಾ ವಹಿಸಲಾಗಿದೆ. ಜೊತೆಗೆ 700 ಮಂದಿ ಇರುವ ನೆಲೆಯನ್ನು ಬಫರ್ಜೋನ್ ಎಂದು ಗುರುತಿಸಿ ಪ್ರತ್ಯೇಕವಾಗಿಡಲಾ ಗಿದೆ. ಈ ಎರಡು ಕಡೆಯವರು ಹೊರಗಿನವರನ್ನು ಸಂಪರ್ಕಿಸದಂತೆ ಐದು ಗೇಟ್ಗಳನ್ನು ಅಳವಡಿಸಿ ಪೊಲೀಸ್ ಬಂದೋಬಸ್ತ್ ಅಳವಡಿಸಲಾಗಿದೆ.
ಕಪ್ರ್ಯೂ ಸಡಲಿಕೆ ಸಮಯದಲ್ಲಿ ತರಕಾರಿ ಖರೀದಿಸಿದ ಕೆಲವು ಗ್ರಾಹಕರು ತರಕಾರಿ ಬೆಲೆ ದುಪ್ಪಟ್ಟು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಬೆಳಿಗ್ಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಪತ್ರಿಕೆ ವಿತರಿಸುತ್ತಿದ್ದ ಪತ್ರಿಕಾ ಏಜೆಂಟರೊಂದಿಗೆ ಪೊಲೀಸರು ದರ್ಪ ತೋರಿದರೆಂದು ಕೆಲವು ಏಜೆಂಟರು ದೂರಿದರು.
ವೀರಾಜಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೆಗೌಡ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಸಿದ್ದಾಪುರ: ಸಿದ್ದಾಪುರ, ನೆಲ್ಯಹುದಿಕೇರಿ, ಅಮ್ಮತ್ತಿ, ಚೆನ್ನಯ್ಯನಕೋಟೆ, ಮಾಲ್ದಾರೆ, ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಪಟ್ಟಣಗಳು ಹಾಗೂ ಗ್ರಾಮಗಳು ಬಂದ್ ಆಗಿ ಸಂಪೂರ್ಣ ಸ್ತಬ್ಧವಾಗಿತ್ತು.
ಸರಕಾರವು ಜನರು ಮನೆಯಿಂದ ಅನಗತ್ಯವಾಗಿ ಹೊರ ಬರದಂತೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ಕೆಲವರು ಅನಗತ್ಯವಾಗಿ ಪಟ್ಟಣಕ್ಕೆ ಆಗಮಿಸಿ ಸುತ್ತಾಡುತ್ತಿದ್ದಾಗ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ಸಿದ್ದಾಪುರದಲ್ಲಿ ಅಂಚೆ ಕಚೇರಿ ಹಾಗೂ ಬ್ಯಾಂಕ್ ತೆರೆದಿದ್ದರೂ ಸಾರ್ವಜನಿಕರು ಕಚೇರಿಗೆ ಬರಲು ಮುಂದಾಗಲಿಲ್ಲ. ಮೆಡಿಕಲ್ ಅಂಗಡಿಗಳು ಮತ್ತು ಪೆಟ್ರೋಲ್ ಬಂಕ್ಗಳು ತೆರೆಯಲ್ಪಟ್ಟಿದ್ದವು. ಪಡಿತರ ಅಂಗಡಿಗಳು ತೆರೆದಿದ್ದರು ಕೂಡಾ ಬೆರಳೆಣಿಕೆಯಷ್ಟು ಮಂದಿ ಆಗಮಿಸಿ ಪಡಿತರ ಸಾಮಗ್ರಿಗಳನ್ನು ಖರೀದಿಸಿದರು. ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಮಾತ್ರ ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದ್ದರಿಂದ ಈ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಾರ್ವಜನಿಕರು ಆಗಮಿಸಿ ಕೂಡಲೇ ಹಿಂತಿರುಗಿದರು. ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನಗಳು ರಸ್ತೆಗೆ ಇಳಿಯದ ಪರಿಣಾಮ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ವಾಹನಗಳಿಗಾಗಿ ಪರದಾಡಿದರು. ಮಾಲ್ದಾರೆಯ ಚೆಕ್ಪೋಸ್ಟ್ನಲ್ಲಿ ಸಿದ್ದಾಪುರ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪೊನ್ನಂಪೇಟೆ: ಎಲ್ಲಿಯೂ ಕೂಡ ಜನ ಗುಂಪು ಸೇರಲು ಹಾಲು ಖರೀದಿ ಹಾಗೂ ಮೆಡಿಕಲ್ ಶಾಪ್ಗೆ ಅಲ್ಲಲ್ಲಿ ಒಬೊಬ್ಬರು ರಸ್ತೆಗಿಳಿದದ್ದು ಬಿಟ್ಟರೆ ಇಂದೂ ಕೂಡ ಪೊನ್ನಂಪೇಟೆ ಸ್ತಬ್ಧವಾಗಿತ್ತು. ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಗ್ಯಾಸ್, ಬ್ಯಾಂಕ್ ಹಾಗೂ ಎಟಿಎಂಗಳು ಕಾರ್ಯ ನಿರ್ವಹಿಸಿದರೂ ಕೂಡ ಗ್ರಾಹಕರ ಸಂಖ್ಯೆ ಬಹಳ ವಿರಳವಾಗಿತ್ತು.
12 ಗಂಟೆಯಿಂದ ಕೆಲವು ದಿನಸಿ ಅಂಗಡಿ ಹಾಗೂ ತರಕಾರಿ ಅಂಗಡಿಗಳನ್ನು ತೆರೆಯಲಾಯಿತು. ಈ ಸಂದರ್ಭ ಜನರು ಒಮ್ಮೆಗೆ ಅಂಗಡಿ ಕಡೆಗೆ ನುಗ್ಗತೊಡಗಿದಾಗ ಸ್ವಲ್ಪ ಮಟ್ಟಿಗೆ ನೂಕು ನುಗ್ಗಲು ಉಂಟಾಯಿತು. ಎಲ್ಲಾ ದಿನಸಿ ಅಂಗಡಿಗಳಲ್ಲೂ ಈರುಳ್ಳಿ, ಆಲೂಗೆಡ್ಡೆ, ಮೊಟ್ಟೆ, ತರಕಾರಿಗಳು ಇಂದು ಖಾಲಿಯಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಯಾಗದಿದ್ದಲ್ಲಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ಶ್ರೀಮಂಗಲ: ಕೊಡಗು ಮೂಲಕ ಕೇರಳಕ್ಕೆ ಸಂಪರ್ಕ ಹೊಂದಿರುವ ಕುಟ್ಟ -ಶ್ರೀಮಂಗಲ ಮತ್ತು ಕಾನೂರು-ಕುಟ್ಟ ರಾಜ್ಯ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.
ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಹುದಿಕೇರಿ, ಕಾನೂರು ಪಟ್ಟಣಗಳಲ್ಲಿ ಜನರು ರಸ್ತೆಗೆ ಇಳಿಯಲಿಲ್ಲ. ಯಾವುದೇ ಅಂಗಡಿ ತೆರೆದಿರಲಿಲ್ಲ. ಈ ಎಲ್ಲಾ ಪಟ್ಟಣಗಳಲ್ಲಿ ಶ್ರೀಮಂಗಲ, ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರ ಬೀಟ್ ವ್ಯವಸ್ಥೆ ನಡೆಯುತ್ತಿದೆ
ಟಿ.ಶೆಟ್ಟಿಗೇರಿ ಗ್ರಾ.ಪಂ.ನಿಂದ ವಾಹನದಲ್ಲಿ ಧ್ವನಿವರ್ಧಕ ಮೂಲಕ ಕೋವಿಡ್ -19 ಸೋಂಕಿನ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಾಗರಿಕರು ಹೊರಗೆ ಅನಗತ್ಯ ತೆರಳದಂತೆ ಹಾಗೆಯೇ ಹೊರಗಿನ ಅಥವಾ ಅಪರಿಚಿತರು ಕಂಡುಬಂದರೆ ಅವರ ಬಗ್ಗೆ ವಿಚಾರಿಸಿ ಗ್ರಾ.ಪಂ. ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗುತ್ತಿದೆ ಎಂದು ಗ್ರಾ.ಪಂ.ಅಧ್ಯಕ್ಷ ಮಚ್ಚಮಾಡ ಸುಮಂತ್ ತಿಳಿಸಿದ್ದಾರೆ.
ಕುಟ್ಟ ಚೆಕ್ಪೋಸ್ಟ್ನಲ್ಲಿ ಕೇರಳದ ಯಾವುದೇ ವಾಹನಕ್ಕೆ ಪ್ರವೇಶಾವಕಾಶವಿಲ್ಲ. ಕೊಡಗಿನಿಂದ ಕೇರಳಕ್ಕೆ ಯಾವುದೇ ವಾಹನವನ್ನು ಮತ್ತು ಜನರನ್ನು ಬಿಡುತ್ತಿಲ್ಲ.
- ಡಿ.ಎಂ.ಆರ್., ವಾಸು, ಚನ್ನನಾಯಕ , ಹರೀಶ್ ಮಾದಪ್ಪ