ಮಡಿಕೇರಿ, ಮಾ. 24 : ಪ್ರಸ್ತುತ ಸನ್ನಿವೇಶದಲ್ಲಿ ಎದುರಾಗಿರುವ ಪರಿಸ್ಥಿತಿ ನಡುವೆ ಮನೆಯೊಳಗೆ ಇರುವವರು ಉಷಾಃಕಾಲದಲ್ಲಿ (ಮುಂಜಾನೆ) ಮತ್ತು ಮುಸ್ಸಂಜೆ ವೇಳೆ, ಮನೆಮಂದಿಯೆಲ್ಲರೂ ಸೇರಿ ಲಘು ವ್ಯಾಯಾಮ, ಯೋಗ, ಧ್ಯಾನದಿಂದ ಸಂತೋಷದೊಂದಿಗೆ ದಿನ ಕಳೆಯುವದು ಒಳಿತು ಎಂದು ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕ ಕೆ. ಕೆ ಮಹೇಶ್ ಕುಮಾರ್ ಸಲಹೆ ನೀಡಿದ್ದಾರೆ. ಜಾಗತಿವಾಗಿ ಕೊರೊನಾ ಸೋಂಕಿನ ಭೀತಿಯಿಂದ ಮನುಕುಲ ಹೊರ ಬಂದು; ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿ ಮಾರ್ಗವೆಂದು ಅವರು ನೆನಪಿಸಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟಲು, ಜನತಾ ಕಫ್ರ್ಯೂ ಅನಿರ್ದಿಷ್ಟಕಾಲ ಮುಂದುವರೆಯುವ ಸಾಧ್ಯತೆಗಳಿವೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿದ್ದು ಕೊಂಡೇ ಹಿರಿಯರು, ಮಕ್ಕಳು ಶಾರೀರಿಕವಾಗಿ, ಮಾನಸಿಕವಾಗಿ ನಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿವೆ ಎಂದು ನೆನಪಿಸಿದ್ದಾರೆ.
ನಿತ್ಯ ಮನೆಯಿಂದ ಹೊರಗೆ ಹೋಗಿ ವ್ಯಾಯಾಮ ಮಾಡುತ್ತಿದ್ದವರು ಕೂಡ ಮನೆಯೊಳಗೆ, ಮಕ್ಕಳು ಚಟುವಟಿಕೆಯಿಂದ ಇರಲು, ಮನಸ್ಸು- ಶರೀರಕ್ಕೆ ಮುದ ನೀಡಲು, ಮನೆಯೊಳಗೆ ಇದ್ದುಕೊಂಡು ಸರಳ ಯೋಗ, ಪ್ರಾಣಾಯಾಮದ ಮೂಲಕ ಸದೃಢಗೊಳಿಸುವದರೊಂದಿಗೆ ವೈರಸ್ ವಿರುದ್ಧ ಹೋರಾಡಲು ಶಾರೀರಿಕ, ಮಾನಸಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದ್ದಾರೆ.
ಮನೆಯಲ್ಲೇ ಗಾಳಿ, ಬೆಳಕು ಚೆನ್ನಾಗಿರುವ ಶುದ್ಧ ಕೊಠಡಿಯಲ್ಲಿ ಸೂರ್ಯೋದಯ, ಸೂರ್ಯಾಸ್ತಮ ಸಮಯದಲ್ಲಿ 30 ರಿಂದ 45 ನಿಮಿಷಗಳ, ಎಲ್ಲರೂ ಮಾಡುವಂತಹ ಸರಳ ಯೋಗಾಸನಗಳಲ್ಲಿ ತೊಡಗುವಂತೆ ಸಲಹೆ ನೀಡಿದ್ದಾರೆ. ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ ಮಾಡಬೇಕು.
ಉಸಿರಾಟದ ವ್ಯಾಯಾಮಗಳು: ಸೂರ್ಯನಮಸ್ಕಾರ, ತಾಡಾಸನ, ಅರ್ಧಚಕ್ರಾಸನ, ಉತ್ಕಟಾಸನ, ಉತ್ಥಾನಾಪಾಡಾಸನ, ವಜ್ರಸಾನ, ಭುಜಂಗಾಸನ, ಶವಾಸನ ಇತ್ಯಾದಿಯಿಂದ ದಿನವನ್ನು ಸಂತೋಷದೊಂದಿಗೆ ಸದಾ ಕ್ರಿಯಾಶೀಲರಾಗಿ ಕಳೆಯಬಹುದು ಎಂದು ಅವರು ನೆನಪಿಸಿದ್ದಾರೆ.
ಸೂರ್ಯ ನಮಸ್ಕಾರದ ಉಪಯೋಗಗಳು
ತೂಕ ಇಳಿಕೆ, ಜೀರ್ಣ ಪ್ರಕ್ರಿಯೆಗೆ ಸಹಾಯ, ಸಕ್ಕರೆ ಕಾಯಿಲೆ ನಿಯಂತ್ರಣ.
ತಾಡಾಸನ: ನರವ್ಯೂಹ ಉತ್ತೇಜನೆ, ಅಂಗ ರಚನೆಗೆ ಸಹಾಯ.
ಅರ್ಧ ಚಕ್ರಾಸನ: ಬೆನ್ನಿಗೆ ಬಲ ನೀಡುತ್ತದೆ.
ಉತ್ಕಟಾಸನ: ತೊಡೆ ಹಾಗೂ ಪಾದಗಳಿಗೆ ಬಲ ನೀಡುತ್ತದೆ.
ವಜ್ರಾಸನ: ಹೊಟ್ಟೆ ಅಸ್ವಸ್ಥತೆ ಸರಿಪಡಿಸುತ್ತದೆ, ದೇಹದ ಆಮ್ಲತೆಯನ್ನು ನಿಯಂತ್ರಿಸುತ್ತದೆ.
ಭುಜಂಗಾಸನ: ಬೆನ್ನುಮೂಳೆಯನ್ನು ಬಲಪಡಿಸುತ್ತದೆ, ಒತ್ತಡ ಹಾಗೂ ಆಯಾಸ ನಿಯಂತ್ರಿಸುತ್ತದೆ.
ಶವಾಸನ: ದೇಹಕ್ಕೆ ವಿಶ್ರಾಂತಿ ನೀಡುತ್ತದೆ, ತಲೆನೋವು ಕಡಿಮೆಯಾಗುತ್ತದೆ. ರಕ್ತದೊತ್ತಡ ನಿಯಂತ್ರಿಸುತ್ತದೆ.
ಉತ್ಥಾನಾ ಪಾದಾಸನ: ಸೊಂಟ ನೋವನ್ನು ಕಡಿಮೆ ಮಾಡುತ್ತದೆ.