ಗೋಣಿಕೊಪ್ಪಲು, ಮಾ. 24: ಕೊರೊನಾ ವೈರಸ್ ಮಹಾಮಾರಿ ಹರಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗೋಣಿಕೊಪ್ಪ ನಗರದಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು.ಪೊಲೀಸರು ಜನ ಸಂದಣಿ ಸೇರದಂತೆ ಎಚ್ಚರಿಕೆ ನೀಡಿದರೆ, ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿ ತಮ್ಮ ವಾಹನದಲ್ಲಿ ಕೊರೊನಾ ವೈರಸ್‍ನ ಬಗ್ಗೆ ಧ್ವನಿವರ್ಧಕ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಮುಂಜಾನೆ ಹಾಲು ಹಾಗೂ ದಿನ ಪತ್ರಿಕೆಗಳಿಗಳನ್ನು ಕೊಂಡುಕೊಳ್ಳಲು ನಾಗರಿಕರು ನಗರದತ್ತ ಆಗಮಿಸಿದ್ದರು. 8 ಗಂಟೆ ಆಗುತ್ತಿದ್ದಂತೆ ಪೊಲೀಸರು ನಗರದಲ್ಲಿದ್ದ ಕೆಲವೇ ಕೆಲವರನ್ನು ನಿಲ್ದಾಣದಿಂದ ಖಾಲಿ ಮಾಡಿಸಿದರು. ಪತ್ರಿಕೆಗಳನ್ನು ವಿತರಿಸಲು ಅವಕಾಶವಿದ್ದರೂ ಪತ್ರಿಕೆ ವಿತರಿಸದಂತೆ ಏಜೆಂಟರನ್ನು ಎಚ್ಚರಿಸಿ ಅರ್ಧದಲ್ಲಿಯೇ ಪತ್ರಿಕೆ ವಿತರಣೆ ನಿಲ್ಲಿಸಿದರು. ಇದರಿಂದ ನಾಗರಿಕರು ಅಸಮಾಧಾನಗೊಂಡು ತಮ್ಮ ಮನೆಗೆ ತೆರಳಿದರು.

ನಗರದಲ್ಲಿ ಮುಂಜಾನೆ ಜನಸಂಚಾರ ಕಂಡು ಬಂತಾದರೂ 8 ಗಂಟೆಯ ನಂತರ ಸಂಚಾರ ಅತ್ಯಂತ ವಿರಳವಾಗಿತ್ತು. 12 ಗಂಟೆಯ ನಂತರ 144 ಸೆಕ್ಷನ್ ಸಡಿಲಗೊಂಡ ಹಿನ್ನೆಲೆಯಲ್ಲಿ ದಿನಸಿ, ತರಕಾರಿ, ಸೊಪ್ಪು ಅಂಗಡಿಗಳು ತೆರೆದವು. ಈ ಸಂದರ್ಭ ನಾಗರಿಕರು ಅಗತ್ಯ ವಸ್ತುಗಳನ್ನು ಪಡೆಯಲು ಮುಗಿಬಿದ್ದರು. ಕೇವಲ ಎರಡು ಗಂಟೆಯ ಬಿಡುವು ನೀಡಿದ ಹಿನ್ನೆಲೆಯಲ್ಲಿ ದಿನಸಿ ಸಾಮಗ್ರಿಗಳು ಮುಗಿದು ಹೋಗಬಹುದೆಂಬ ಧಾವಂತದಲ್ಲಿ ಸಾರ್ವಜನಿಕರು ದಿನಸಿ ಅಂಗಡಿ ಮುಂದೆ ಜಮಾಯಿಸಿದ್ದರು.

ವರ್ತಕರು ಗ್ರಾಹಕರನ್ನು ಸಮಾಧಾನಪಡಿಸಿ ಸರತಿ ಸಾಲಿನಲ್ಲಿ ನಿಲ್ಲಿಸಿ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ವಸ್ತುಗಳೆಲ್ಲವೂ ಕ್ಷಣಾರ್ಧದಲ್ಲಿ ಖಾಲಿಯಾದವು. ಯುಗಾದಿ ಹಬ್ಬದ ಪ್ರಯುಕ್ತ ಅಂಗಡಿಗಳಲ್ಲಿ ಅಚ್ಚುಬೆಲ್ಲ ಸಿಗಲಿಲ್ಲ. ಪೊಲೀಸರು ಬೇಗ ಬೇಗನೆ ವಸ್ತುಗಳನ್ನು ಪಡೆದು ಮನೆಗೆ ತೆರಳುವಂತೆ ಸೂಚನೆ ನೀಡುತ್ತಿದ್ದರು. ಆತುರಾತುರವಾಗಿ ಗ್ರಾಹಕರು ದಿನಸಿ ಅಂಗಡಿಯ ಮುಂದೆ ಕಾಣಿಸಿಕೊಂಡರು. ಯುಗಾದಿ ಹಬ್ಬಕ್ಕೆ ಬಹುಮುಖ್ಯವಾಗಿ ಬೇಕಾಗಿರುವ ಕಹಿ ಬೇವು ಮಾರುಕಟ್ಟೆಗೆ ಹೆಚ್ಚಾಗಿ ಬಂದಿದ್ದವು. ಕೊರೊನಾ ಭೀತಿಯ ನಡುವೆಯೂ ಹೊಸ ವರ್ಷ ಯುಗಾದಿ ಹಬ್ಬ ಆಚರಿಸಲು ಸೊಪ್ಪು ಖರೀದಿಯಲ್ಲಿ ಮಹಿಳೆಯರು ತೊಡಗಿದ್ದರು.

ಹಾಲು, ಮೆಡಿಕಲ್ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು ತೆರೆದು ವಹಿವಾಟು ಆರಂಭಿಸಿದ್ದವು. ಆದರೆ ಜನಸಂಖ್ಯೆ ವಿರಳವಾಗಿತ್ತು.. ಸರ್ಕಾರಿ ಕಚೇರಿಗಳಿಗೆ ತೆರಳುವ ಸಿಬ್ಬಂದಿ ವಾಹನಕ್ಕಾಗಿ ಬಸ್ ನಿಲ್ದಾಣದಲ್ಲಿ ನಿಂತು ಇತರ ವಾಹನಗಳ ಸಹಾಯ ಪಡೆದು ತಮ್ಮ ಕೆಲಸಕ್ಕೆ ತೆರಳಿದರು. ನಗರದಲ್ಲಿ ಪೊಲೀಸ್ ತುಕಡಿ ನಿಯೋಜಿಸಲಾಗಿತ್ತು. ಲಾಠಿ ಹಿಡಿದ ಪೊಲೀಸರು ಅನಾವಶ್ಯಕವಾಗಿ ಓಡಾಡುವವರನ್ನು ಗದರಿಸಿ ಮನೆಗೆ ಕಳುಹಿಸುತ್ತಿದ್ದರು. ಆಟೋ ರೀಕ್ಷಾ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು.

ದ್ವಿಚಕ್ರ, ಕಾರು, ಜೀಪುಗಳ ಸಂಚಾರ ವಿರಳವಾಗಿತ್ತು. ನಗರದತ್ತ ಜನರು ಆಗಮಿಸದಂತೆ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ ಆಗಿಂದಾಗ್ಗೆ ಪೊಲೀಸ್ ವಾಹನದಲ್ಲಿದ್ದ ಧ್ವನಿವರ್ಧಕದ ಮೂಲಕ ನಾಗರಿಕರಿಗೆ ಎಚ್ಚರಿಕೆ ನೀಡುತ್ತಿದ್ದರು. ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಯಾರೂ ಕೂಡ ಸುಳಿದಾಡದಂತೆ ಗಮನ ಹರಿಸಿದ್ದರು. ಬ್ಯಾಂಕ್, ಅಂಚೆ ಕಚೇರಿ, ಚೆಸ್ಕಾಂ, ಆಸ್ಪತ್ರೆ, ಪಂಚಾಯಿತಿ ಕಚೇರಿಗಳು ಕೆಲಸ ನಿರ್ವಹಿಸಿದವು. ಗ್ರಾಹಕರು ಅಷ್ಟಾಗಿ ಕಂಡು ಬರಲಿಲ್ಲ. -ಹೆಚ್.ಕೆ. ಜಗದೀಶ್