ಕೂಡಿಗೆ, ಮಾ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರವೋಳಲು ಮತ್ತು ಮದಲಾಪುರ ಗ್ರಾಮದ ರೈತರ ಜಮೀನಿನ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
ಹುದುಗೂರು ಗ್ರಾಮದ ಸಮೀಪದ ಶಿರವೋಳಲು ಮತ್ತು ಮದಲಾಪುರ ಗ್ರಾಮದ ಹಾರಂಗಿ ನದಿ ದಂಡೆಯ ಸಮೀಪದ ರೈತರ ಬೆಳೆಗಳನ್ನು ಸಂಪೂರ್ಣವಾಗಿ ಬೆಂಡೆಬೆಟ್ಟದ ಕಡೆಯಿಂದ ಅನೇಕ ಕಾಡಾನೆಗಳು ಬಂದು ಭಾರೀ ನಷ್ಟ ಪಡೆಸಿವೆ. ಆದ್ದರಿಂದ ಈ ಭಾಗದ 26 ರೈತರ ಜಮೀನಿನ ಅಂಚಿನಲ್ಲಿ ಸೋಲಾರ್ ಬೇಲಿ ಹಾಕುವ ಕಾರ್ಯದಲ್ಲಿ ಇಲಾಖೆಯು ಮುಂದಾಗಿದೆ.
ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅವರ ತಂಡದ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾರಂಗಿ ನದಿ ದಂಡೆಯ ಅಂಚಿನಲ್ಲಿ ಬೆಂಡೆಬೆಟ್ಟದ ಕಡೆಯಿಂದ ಕಾಡಾನೆಗಳು ಸತತ 20 ದಿನಗಳವರೆಗೆ ಬಂದಿರುವ ಮಾಹಿತಿಯನ್ನು ಪಡೆದ ಅಧಿಕಾರಿ ರೈತರ ಜಮೀನಿಗೆ ಕಾಡಾನೆ ಹಾವಳಿ ತಡೆಯಲು ಸರಕಾರಕ್ಕೆ ಪರಿಹಾರದ ಬದಲಿ ಮಾರ್ಗ ವಾಗಿ ಅನುಕೂಲ ಕಲ್ಪಿಸಲು ಸೋಲಾರ್ ಬೇಲಿ ನಿರ್ಮಾಣ ಅನುದಾನ ಕೋರಿದರು.ಅದರಂತೆ ಕೃಷಿ ಸಮೃದ್ಧಿ ಯೋಜನೆಯ ಅಡಿಯಲ್ಲಿ ಅರಣ್ಯ ಇಲಾಖೆಯ 50 ಭಾಗದ ಹಣ ಮತ್ತು ಆ ಭಾಗದ ರೈತರು 50 ಭಾಗ ಹಣವನ್ನು ವಿನಿಯೋಗಿಸಿ ಸೋಲಾರ್ ಬೇಲಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ.