ಕೂಡಿಗೆ, ಮಾ. 21: ಮೈಸೂರಿನ ಓಡಿಪಿ ಸಂಸ್ಥೆ ವತಿಯಿಂದ ರೈತರ ಅಭಿವೃದ್ಧಿಗೆಂದು ರಚನೆಗೊಂಡ ರೈತ ಉತ್ಪನ್ನ ಕೂಟದ ಪರಿಕಲ್ಪನೆ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಕೂಡಿಗೆಯ ಕಾಬ್ಸೆಟ್ ತರಬೇತಿ ಕೇಂದ್ರದಲ್ಲಿ ನಡೆಯಿತು. ಕಾಬ್ಸೆಟ್ ನಿರ್ದೇಶಕ ಡಾ. ಸುರೇಶ್ ಕಾರ್ಯಾಗಾರ ಉದ್ಘಾಟಿಸಿದರು. ಓಡಿಪಿ ಸಂಸ್ಥೆಯ ಸಹಯೋಗದೊಂದಿಗೆ ರೈತ ಉತ್ಪನ್ನ ಕೂಟದ ಮೂಲಕ ಹೈನುಗಾರಿಕೆ, ಅಣಬೆ ಬೇಸಾಯ, ಜೇನು ಸಾಕಾಣಿಕೆ ಸೇರಿದಂತೆ ಮೌಲ್ಯವರ್ಧಿತ ಸೇವೆ ಹಾಗೂ ಕೌಶಲ್ಯಾಧಾರಿತ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಉತ್ಪನ್ನಕೂಟದಲ್ಲಿ ಸದಸ್ಯರಾಗುವಂತೆ ಅವರು ಸಲಹೆ ನೀಡಿದರು.
ರೈತ ಉತ್ಪನ್ನ ಕೂಟದ ಸಂಯೋಜಕರಾದ ರಮೇಶ್ ಮತ್ತು ಜಾನ್ ಬಿ ರಾಡ್ರಿಗಸ್ ರೈತೋತ್ಪನ್ನ ಕೂಟದ ಪರಿಕಲ್ಪನೆ, ಧ್ಯೇಯೋದ್ದೇಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿದರು. ಕುಶಾಲನಗರ ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಮುತ್ತಮ್ಮ ಕ್ಯಾನ್ಸರ್, ಕೊರೊನಾ ತಡೆಗಟ್ಟುವಿಕೆ ಮತ್ತು ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ಒದಗಿಸಿದರು. ಮಾಹಿತಿ ಕಾರ್ಯಾಗಾರದಲ್ಲಿ ಕೂಡಿಗೆ, ಕೂಡುಮಂಗಳೂರು, ಹಾನಗಲ್, ಹೆಬ್ಬಾಲೆ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು. ಓಡಿಪಿ ಸಂಸ್ಥೆಯ ಕೊಡಗು ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೇಜಸ್ ಇದ್ದರು.