ಮಡಿಕೇರಿ, ಮಾ. 21: ಜಿಲ್ಲೆಯ ವೀರಾಜಪೇಟೆ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ತಂಡವನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣವೊಂದನ್ನು ಪತ್ತೆಹಚ್ಚಲು ಮಾಹಿತಿ ಕಲೆಹಾಕುತ್ತಿದ್ದಾಗ ಕೊಡಗು ಜಿಲ್ಲೆ ಹಾಗೂ ನೆರೆಯ ಹಾಸನ ಜಿಲ್ಲೆಯ ವ್ಯಾಪ್ತಿಯಿಂದಲೂ ಗೌಪ್ಯವಾಗಿ ಶ್ರೀಗಂಧದ ಮರಗಳನ್ನು ಕಳ್ಳತನದಿಂದ ಕತ್ತರಿಸಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಕೊಂಡಂಗೇರಿ ಹಾಗೂ ಮಡಿಕೇರಿಯ ಸ್ಥಳೀಯ ಮಧ್ಯವರ್ತಿ ಚೋರರು ಖರೀದಿಸುವ ಮುಖಾಂತರ ಮೈಸೂರು ಮೂಲದ ವ್ಯಕ್ತಿಗಳು ಮಡಿಕೇರಿ ಹಾಗೂ ಕೊಂಡಂಗೇರಿಗೆ ಬಂದು ಖರೀದಿಸುವ ವ್ಯವಹಾರ ಮಾಡುತ್ತಿದ್ದ ಜಾಲದ ಬಗ್ಗೆ ಜಾಡುಹಿಡಿದ ಪೊಲೀಸರು ಒಟ್ಟು 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ 7 ಮಂದಿ ಆರೋಪಿಗಳು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟೋಳಿ ಹಾಗೂ ಚೆಂಬೆಬೆಳ್ಳೂರು ಗ್ರಾಮದಿಂದ 2 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ 2 ಪ್ರಕರಣದಲ್ಲಿ ಮತ್ತು ಹಾಸನ ಜಿಲ್ಲೆ ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ಭಾಗಿಯಾಗಿರುವುದು ಪೊಲೀಸ್ ತನಿಖೆಯ ಸಮಯದಲ್ಲಿ ದೃಢಪಟ್ಟಿದೆ.

ಈ ಸಂಬಂಧ ಅಬ್ದುಲ್ ಜಾಫರ್, ಎ.ಎಂ. ಅಬ್ದುಲ್ಲಾ, ವಿ.ಜಿ. ಮನ್ಮಥ, ಸಿ.ಎಸ್. ಭೀಮಯ್ಯ, ಎರ್ಮು, ಪ್ರೀತು ಪಿ.ಕೆ.,

(ಮೊದಲ ಪುಟದಿಂದ) ಸೈಯದ್ ಗೌಸ್ ಮೊಹದ್ದೀನ್ ಎಂಬವರುಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ ಅಂದಾಜು 50 ಸಾವಿರ ಮೌಲ್ಯದ 6 ಕೆ.ಜಿ. ಶ್ರೀಗಂಧದ ತುಂಡುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನ ಸೇರಿದಂತೆ ಇತರ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿಯ ಪ್ರಭಾರ ಇನ್ಸ್‍ಪೆಕ್ಟರ್ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಗಳಾದ ಕೆ.ವೈ. ಹಮೀದ್, ಕೆ.ಎಸ್. ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್‍ಕುಮಾರ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್, ಬಿ.ಜೆ. ಶರತ್ ರೈ, ಯು.ಎ. ಮಹೇಶ್ ಹಾಗೂ ಚಾಲಕ ಕೆ.ಎಸ್. ಶಶಿಕುಮಾರ್ ಹಾಗೂ ಸಿಡಿಆರ್ ಸೆಲ್‍ನ ರಾಜೇಶ್ ಹಾಗೂ ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.