ಬೆಂಗಳೂರು, ಮಾ. 21: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಭಾನುವಾರ ಜನತಾ ಕಫ್ರ್ಯೂಗೆ ಕರೆ ನೀಡಿದ್ದು, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬಂದರೆ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬರಬಾರದು. ತೀರಾ ಅಗತ್ಯ ಇದ್ದರೆ ಮಾತ್ರ ಬನ್ನಿ. ಅನಗತ್ಯವಾಗಿ ಬೀದಿಗೆ ಬಂದು ಗುಂಪು ಸೇರುವುದು, ನಿಂತುಕೊಳ್ಳುವುದು, ಟೈಂಪಾಸ್ ಮಾಡುವುದು ಮಾಡಿದರೆ ಕೇಸ್ ದಾಖಲಿಸಲಾಗುತ್ತದೆ. ಸಾರ್ವಜನಿಕರು ಜನತಾ ಕಫ್ರ್ಯೂವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ದೇಶಾದ್ಯಂತ ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿದ್ದು, ಇದನ್ನು ತಡೆಯಲು ಜನ ನಾಳೆ ಮನೆಯಲ್ಲಿಯೇ ಇರಬೇಕು, ಪ್ರವಾಸ, ವಾಕಿಂಗ್, ಕಾರ್ಯಕ್ರಮ ಅಂತ ಓಡಾಡುವಂತಿಲ್ಲ. ರಸ್ತೆ ಮೇಲೆ ತಿರುಗಾಡುತ್ತಿದ್ದರೆ 31(ಐ) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜೊತೆ ಮಾತುಕತೆ ನಡೆಸಿದ್ದೇವೆ ಎಂದರು.
ವೈರಸ್ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ
ಬೆಂಗಳೂರು, ಮಾ. 21: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಶನಿವಾರ ಒಂದೇ ದಿನ ಐವರಿಗೆ ಕೊವಿಡ್ - 19 ಇರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಲ್ಲದೆ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ. ನಿನ್ನೆ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಮೈಸೂರಿಗೆ ತೆರಳಿದ್ದ ವ್ಯಕ್ತಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮತ್ತೆ ಮೂವರಲ್ಲಿ ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಒಬ್ಬ ವ್ಯಕ್ತಿಯಲ್ಲಿ ಮತ್ತು ಮೈಸೂರಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ ಎಂದು ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಮೆಕ್ಕಾ ಪ್ರವಾಸದಿಂದ ಬಂದ 32 ವರ್ಷದ ವ್ಯಕ್ತಿಯಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದರು. ಇದೀಗ ಮತ್ತೆ ಮೂವರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ ಸುಧಾಕರ್ ತಿಳಿಸಿದ್ದಾರೆ. ನಿನ್ನೆಯವರೆಗೆ 15 ಜನರಿಗೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಇಂದು ಒಂದೇ ದಿನ ಐವರಲ್ಲಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಮಾಸ್ಕ್, ಸ್ಯಾನಿಟೈಸರ್ಗಳಿಗೆ ದರ ನಿಗದಿ
ನವದೆಹಲಿ, ಮಾ. 21: ಕೊರೊನಾ ವೈರಸ್ ಭೀತಿ ದೇಶದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದಂತೆಯೇ ಕೇಂದ್ರ ಸರ್ಕಾರ ಮಾಸ್ಕ್, ಸ್ಯಾನಿಟೈಸರ್ಗಳನ್ನು ಅತ್ಯಗತ್ಯ ವಸ್ತುಗಳ ಕಾಯ್ದೆ ವ್ಯಾಪ್ತಿಗೆ ಒಳಪಡಿಸಿತ್ತು, ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಸ್ಕ್, ಸ್ಯಾನಿಟೈಸರ್ಗಳಿಗೆ ದರ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವ್ವೀಟ್ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದ್ದಂತೆಯೇ ಮಾಸ್ಕ್, ಸ್ಯಾನಿಟೈಸರ್ಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಮೆಡಿಕಲ್ ಶಾಪ್ಗಳು ದುಬಾರಿ ದರದಲ್ಲಿ ಮಾರಾಟದಲ್ಲಿ ತೊಡಗಿದ್ದವು. ಈ ಹಿನ್ನೆಲೆ ಕೇಂದ್ರ ಸರ್ಕಾರ, ಸರ್ಜಿಕಲ್ ಮಾಸ್ಕ್ ಒಂದಕ್ಕೆ 10 ರೂಪಾಯಿ, 200 ಮಿಲಿ ಲೀಟರ್ ಸ್ಯಾನಿಟೈಸರ್ ಬೆಲೆಯನ್ನು ರೂ. 100 ನಿಗದಿಪಡಿಸಿ ಆದೇಶ ಹೊರಡಿಸಿದೆ ಎಂದು ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಸೋಂಕು ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಈ ಹಿನ್ನೆಲೆ ದೇಶದ ಜನರ ಹಿತದೃಷ್ಟಿಯಿಂದ ಈ ವಸ್ತುಗಳಿಗೆ ದರ ನಿಗದಿಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು 2 ಪ್ಲೆ ಮಾಸ್ಕ್, 8 ರೂ., 3 ಪ್ಲೇ ಸರ್ಜಿಕಲ್ ಮಾಸ್ಕ್ 10 ರೂ. ಗಿಂತ ಹೆಚ್ಚು ಬೆಲೆ ವಿಧಿಸುವಂತಿಲ್ಲ 200 ಎಂಎಲ್ ಸ್ಯಾನಿಟೈಸರ್ಗೆ ರೂ.100 ದರದಲ್ಲೇ ಮಾರಾಟ ಮಾಡುವಂತೆ ದರ ನಿಗದಿ ಪಡಿಸಲಾಗಿದೆ.
ಕಾರ್ಮಿಕರ ಖಾತೆಗಳಿಗೆ ಸಾವಿರ ರೂಪಾಯಿ
ಲಕ್ನೋ, ಮಾ. 21: ಕೊರೊನಾ ವೈರಸ್ ಕಾರಣದಿಂದ ದುಡಿಮೆಯಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿರುವ ರಾಜ್ಯದ ಕೂಲಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೆರವಾಗಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಈ ಕಾರ್ಮಿಕರ ದೈನಂದಿನ ಅಗತ್ಯಗಳಿಗಾಗಿ ಇವರುಗಳ ಬ್ಯಾಂಕ್ ಖಾತೆಗಳಿಗೆ ತಲಾ 1,000 ರೂ. ಜಮಾ ಮಾಡುವುದಾಗಿ ಅವರು ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರದಿಂದ ರಾಜ್ಯದ 15 ಲಕ್ಷ ಕೂಲಿ ಕಾರ್ಮಿಕರು ಹಾಗೂ 20.37 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪ್ರಯೋಜನ ವಾಗಲಿದೆ. 15 ಲಕ್ಷ ದಿನಗೂಲಿ ಕಾರ್ಮಿಕರು, 20.37 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1000 ರೂ ಹಣವನ್ನು ನೇರ ನಗದು ವರ್ಗಾವಣೆಯ ಮೂಲಕ ಅವರ ಖಾತೆಗಳಿಗೆ ವರ್ಗಾವಣೆಯಿಸಿ ನೆರವು ಕಲ್ಪಿಸಲು ನಿರ್ಧರಿಸಲಾಗಿದೆ. ಇದರಿಂದ ಆ ಸಮುದಾಯಗಳಿಗೆ ಅಲ್ಪಸ್ವಲ್ಪ ನೆರವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವಂತೆ ಭಾನುವಾರದ ಜನತಾ ಕಫ್ರ್ಯೂಗೆ ಬೆಂಬಲ ನೀಡಬೇಕು ಎಂದು ಯೋಗಿ ಅದಿತ್ಯ ನಾಥ್ ಜನರಿಗೆ ಮನವಿ ಮಾಡಿದ್ದಾರೆ.
ಕೇರಳ- ದಕ್ಷಿಣ ಕನ್ನಡ ಸಂಪರ್ಕ ಕಡಿತ
ಮಂಗಳೂರು, ಮಾ. 21: ಕೊವಿಡ್ -19 ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು, ಕೇರಳ ರಾಜ್ಯಕ್ಕೆ ಹಾದು ಹೋಗುವ ರಸ್ತೆ ಸಂಪರ್ಕವನ್ನು ತಾ.21 ರಿಂದ 31 ರ ಮಧ್ಯರಾತ್ರಿಯವರೆಗೆ ಮುಚ್ಚಲು ಆದೇಶಿಸಿದ್ದಾರೆ. ಕೇರಳದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಮತ್ತು ಜಿಲ್ಲೆಯ ನಡುವೆ ಯಾವುದೇ ವಾಹನಗಳು ಸಂಚರಿಸಲು ಅನುಮತಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಶುಕ್ರವಾರ ತಡರಾತ್ರಿ ಆದೇಶದಲ್ಲಿ ತಿಳಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಂಗಳೂರು ನಗರದಿಂದ ಸುಮಾರು 17 ಕಿ.ಮೀ. ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ತಲಪಾಡಿ ಚೆಕ್ಪೋಸ್ಟ್ ಮೂಲಕ ಮಾತ್ರ ವಾಹನಗಳ ಸಂಚಾರಕ್ಕೆ ಅನುಮತಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಆರು ಕೋವಿಡ್-19 ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಜನತಾ ಕಫ್ರ್ಯೂ’ ಬೆಂಬಲಿಸಲು ದಕ್ಷಿಣ ಕನ್ನಡದ ಖಾಸಗಿ ಬಸ್ ಮಾಲೀಕರು ಮಾ.22 ರಂದು ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.