ಸೋಮವಾರಪೇಟೆ,ಮಾ. 20: ದೇಶದೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿರುವ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತಹವರನ್ನು ದೇಶದಿಂದ ಹೊರ ಹಾಕಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ, ತಹಶೀಲ್ದಾರ್ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಿಎಎ ಮತ್ತು ಎನ್‍ಆರ್‍ಸಿಯನ್ನು ದೇಶದಲ್ಲಿ ಅಳವಡಿಸುವ ಸಂದರ್ಭ ಅಕ್ರಮ ನುಸುಳುಕೋರರು ಕಂಡುಬಂದಲ್ಲಿ ಅಂತವರನ್ನು ಯಾವದೇ ಮುಲಾಜಿಲ್ಲದೇ ದೇಶದಿಂದ ಹೊರ ಹಾಕಬೇಕು. ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಯ ಸಲುವಾಗಿ ಇಂತಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಇದರೊಂದಿಗೆ ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿಸಿ ದೆಹಲಿಯಲ್ಲಿ ನಡೆದ ಗಲಭೆಗಳು ಪೂರ್ವನಿಯೋಜಿತವಾಗಿದ್ದು, ಕೆಲ ರಾಜಕೀಯ ಪಕ್ಷಗಳ ಮುಖಂಡರೇ ಇದರಲ್ಲಿ ಭಾಗಿಯಾಗಿದ್ದಾರೆ. ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳನ್ನೂ ಈ ಸಂದರ್ಭ ಹತ್ಯೆ ಮಾಡಿರುವದು ಖಂಡನೀಯ. ಇಂತಹ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಕೆ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ. ಮಧು, ಮೋಹನ್‍ಮೂರ್ತಿ ಶಾಸ್ತ್ರೀ, ವಿಶ್ವನಾಥ್, ಶರತ್, ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.