ಮಡಿಕೇರಿ, ಮಾ. 19: ಮಡಿಕೇರಿ ಆಕಾಶವಾಣಿಯಲ್ಲಿ ನಿಧನ ಸುದ್ದಿ ಪ್ರಸಾರಕ್ಕೆ ಯಾರೋ ಒಬ್ಬ ವ್ಯಕ್ತಿ ಸುಳ್ಳು ಮಾಹಿತಿ ನೀಡಿ ಕುಚೇಷ್ಟೆ ಮಾಡಿರುವದನ್ನು ಅಖಿಲ ಕೊಡವ ಸಮಾಜ ಖಂಡಿಸಿದೆ. ಈ ವಿಚಾರದಿಂದಾಗಿ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಇದಕ್ಕಾಗಿ ಪ್ರಸಾರ ಭಾರತಿಯಿಂದ ಇರುವ ವಿಶೇಷ ಅವಕಾಶಕ್ಕೆ ಯಾವುದೇ ಸಮಸ್ಯೆ ಸೃಷ್ಟಿಯಾಗಬಾರದೆಂದು ಸಮಾಜದ ಗೌರವಾಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಹೇಳಿದ್ದಾರೆ.
ಈ ಕುರಿತು ವೃಥಾ ಗೊಂದಲ ಮೂಡಿಸಿರುವುದು ವಿಷಾದಕರವಾಗಿದೆ. ಆದರೆ ಇದನ್ನೇ ಕಾರಣವಾಗಿಟ್ಟುಕೊಂಡು ಪ್ರಸಾರಕ್ಕೆ ವಿವಿಧ ಷರತ್ತುಗಳನ್ನು ಹೇರುವಂತದ್ದು ಜಿಲ್ಲೆಯ ಜನತೆ ಸಾವಿನ ಸಂದರ್ಭ ನೀಡುವ ಪ್ರಾಮುಖ್ಯತೆಗೆ ಅಡಚಣೆಯಾಗಲಿದೆ. ಈ ಬಗ್ಗೆ ನಿಲಯದ ಅಧಿಕಾರಿಗಳು ಅರ್ಥೈಸಿಕೊಂಡು ಇದನ್ನು ವ್ಯವಸ್ಥಿತವಾಗಿ ಸರಳವಾದ ಕ್ರಮ ಅನುಸರಿಸುವ ಮೂಲಕ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಜನತೆಯ ಭಾವನೆಯೊಂದಿಗೆ ಯಾರೂ ಚೆಲ್ಲಾಟವಾಡಬಾರದೆಂದೂ ಅವರು ಮನವಿ ಮಾಡಿದ್ದಾರೆ.
ಅಮ್ಮತ್ತಿ ಕೊಡವ ಸಮಾಜ
ವ್ಯವಸ್ಥಿತವಾಗಿ, ಕಾನೂನು ಬದ್ಧವಾಗಿ ನಡೆಯುತ್ತಿದ್ದ ನಿಧನ ವಾರ್ತೆ ಪ್ರಸಾರಕ್ಕೆ ಗೊಂದಲ ಸೃಷ್ಟಿಸಿರುವ ಕ್ರಮವನ್ನು ಅಮ್ಮತ್ತಿ ಕೊಡವ ಸಮಾಜ ಖಂಡಿಸುವುದಾಗಿ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಹೇಳಿದ್ದಾರೆ. ಇಂತಹ ತಪ್ಪೆಸಗುವ ವ್ಯಕ್ತಿ ವಿರುದ್ಧ ಸೂಕ್ತ ಕ್ರಮದೊಂದಿಗೆ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಮಾಡ ಬೇಕೆಂದು ಅವರು ಆಗ್ರಹಿಸಿದ್ದಾರೆ.