ಕೂಡಿಗೆ, ಮಾ. 18: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕಸಭೆ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲಿಗೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು.

ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರನ್ನು ಸರಬರಾಜು ಮಾಡುವ ಬಗ್ಗೆ ಮತ್ತು ಆಯಾ ವಾರ್ಡ್‍ಗಳಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವ ಬಗ್ಗೆ ಚರ್ಚೆಗಳು ನಡೆದವು. ಸದಸ್ಯರುಗಳಾದ ಕೆ. ರವಿ ಮಂಜಯ್ಯ, ಮೋಹಿನಿ ರಾಮಚಂದ್ರ ಅವರು ಈಗಾಗಲೇ ಕೊರೊನಾ ವೈರಸ್ ಭೀತಿ ಹುಟ್ಟಿರುವ ಹಿನ್ನೆಲೆ ಗ್ರಾಮ ಪಂಚಾಯಿತಿ ಮತ್ತು ಆಡಳಿತ ಮಂಡಳಿಯು ಸಂಪೂರ್ಣವಾಗಿ ಶುಚಿತ್ವದ ಕಡೆ ಗಮನ ಹರಿಸುವಂತೆ ಮನವಿ ಮಾಡಿದರು. ಸದಸ್ಯರುಗಳ ಒಕ್ಕೊರಲಿನ ಅಭಿಪ್ರಾಯದಂತೆ ಶುಚಿತ್ವಕ್ಕೆ ಹೆಚ್ಚು ಗಮನ ಹರಿಸಿ ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ರೋಗಗಳು ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅದರಂತೆ ಗ್ರಾಮದ ಎಲ್ಲಾ ವಾರ್ಡ್‍ಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಸಭೆಗೆ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ಹೆಚ್.ಎಸ್. ರವಿ, ರಾಮಚಂದ್, ರತ್ನಮ್ಮ, ಮೋಹಿನಿ, ಮಂಜಯ್ಯ ಮುಂತಾದವರು ಹಾಜರಿದ್ದರು.