ಗೋಣಿಕೊಪ್ಪಲು, ಮಾ. 18: ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಟ್ಟಗೇರಿ ಗ್ರಾಮದ ಅಳಮೇಂಗಡ ಗೋಕುಲ ಎಂಬವರ ಕರುವನ್ನು ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಹುಲಿಯೊಂದು ದಾಳಿ ನಡೆಸಿದೆ. ಈ ಸಂದರ್ಭ ಹುಲಿ ಹಾಗೂ ಕರುವಿನ ನಡುವೆ ಕಾದಾಟ ನಡೆದಿದ್ದು, ಇದರಿಂದ ನಿತ್ರಾಣಗೊಂಡಿರುವ ಹುಲಿಯು ಕರುವನ್ನು ಅಲ್ಲೆ ಬಿಟ್ಟು ತೆರಳಿದೆ. ಸಮೀಪವಿದ್ದ ಕಾರ್ಮಿಕರು ಗಂಭೀರ ಗಾಯಗೊಂಡ ಕರುವನ್ನು ಮನೆಗೆ ಕರೆದೊಯ್ದಿದ್ದಾರೆ.ಇದೀಗ ಕರುವು ಜೀವನ್ಮರಣ ಸ್ಥಿತಿಯಲ್ಲಿದೆ.

ಕಳೆದ ಎರಡು ದಿನಗಳಲ್ಲಿ ದಿನಕ್ಕೊಂದರಂತೆ ಹುಲಿಯು ಅಕ್ಕ ಪಕ್ಕದ ಗ್ರಾಮದ ರೈತರು ಮೇಯಲು ಬಿಟ್ಟಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ. ಸುದ್ದಿ ತಿಳಿದ ತಿತಿಮತಿ ಅರಣ್ಯ ವಲಯದ ಎಸಿಎಫ್ ಶ್ರೀಪತಿ ಹಾಗೂ ಸಿಬ್ಬಂದಿ ಘಟನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಹುಲಿ ಸೆರೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಗ್ರಾಮಸ್ಥರೊಡಗೂಡಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವ ಕರುವಿಗೆ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ಹುಲಿಯ ಸೆರೆಗೆ ಬೋನನ್ನು ಅಳವಡಿಸಿದ್ದರೂ ಹುಲಿ ಮಾತ್ರ ಬೋನಿನ ಬಳಿ ಸುಳಿಯುತ್ತಿಲ್ಲ. ಇದರಿಂದಾಗಿ ಅರಣ್ಯ ಅಧಿಕಾರಿಗಳಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿದೆ.

-ಹೆಚ್.ಕೆ. ಜಗದೀಶ್