ಗೋಣಿಕೊಪ್ಪಲು, ಮಾ. 15: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕ ಹಾಗೂ ರೆಡ್‍ಕ್ರಾಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊರೊನಾ ವೈರಸ್‍ನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಗೋಣಿಕೊಪ್ಪಲು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಗ್ರೀಷ್ಮ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ಸಾಂಕ್ರಾಮಿಕ ರೋಗ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಕನಿಷ್ಟ 20-30 ಸೆಕೆಂಡುಗಳ ಕಾಲ ಕೈಗಳನ್ನು ಸೋಪು ಹಾಕಿ ಶುಚಿಗೊಳಿಸಿಕೊಳ್ಳಬೇಕು. ನೀರು ಲಭ್ಯವಿಲ್ಲದಿದ್ದಾಗ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ ಬಳಸಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲೆ ಪ್ರೊ. ಪೂವಮ್ಮ ವಹಿಸಿದ್ದರು. ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಮ್, ಲೇಪಾಕ್ಷಿ, ರೆಡ್‍ಕ್ರಾಸ್ ಘಟಕದ ಅಧಿಕಾರಿ ಕುಶಾಲಪ್ಪ ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕೆಡೆಟ್ ದೇಚಮ್ಮ ನಿರ್ವಹಿಸಿದ್ದರು.

ಸಿದ್ದಾಪುರ: ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿದ್ದಾಪುರ ಹಾಗೂ ಮಾಲ್ದಾರೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸಿದ್ದಾಪುರದ ಅಂಗಡಿಗಳಿಗೆ ಹಾಗೂ ವಾಹನ ಚಾಲಕರಿಗೆ ಕರಪತ್ರವನ್ನು ಆರೋಗ್ಯ ಇಲಾಖೆ ವತಿಯಿಂದ ವಿತರಿಸಲಾಯಿತು. ಈ ಸಂದರ್ಭ ಮಾಲ್ದಾರೆ ಆರೋಗ್ಯ ಇಲಾಖೆಯ ನಿರೀಕ್ಷಕ ಸುದರ್ಶನ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು