ಮಡಿಕೇರಿ, ಮಾ. 15: ವಾಯುಮಾಲಿನ್ಯಕ್ಕೆ ಆಸ್ಪದವಾಗಲಿರುವ ಭಾರತ್ ಸ್ಟೇಜ್ -4 ವಾಹನಗಳ ಮಾರಾಟ ಹಾಗೂ ನೋಂದಣಿಗೆ ಸರ್ವೋಚ್ಚ ನ್ಯಾಯಾಲಯ ಮಾ. 31ರ ಗಡುವು ನೀಡಿದೆ. ಮಾ. 31ರ ಒಳಗಡೆ ನೋಂದಣಿಯಾಗದಿದ್ದಲ್ಲಿ ಅಂತಹ ವಾಹನಗಳನ್ನು ಇನ್ನು ಮುಂದಕ್ಕೆ ಓಡಿಸುವಂತಿಲ್ಲ; ಅಲ್ಲದೆ, ವಾಹನ ಖರೀದಿಸಿ ಇದುವರೆಗೆ ನೋಂದಣಿ ಮಾಡಿಸಿಕೊಳ್ಳದೆ ಹಾಗೆ ಓಡಿಸುತ್ತಿರುವವರು ದಂಡ ಸಹಿತವಾಗಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಲೇಬೇಕಿದೆ.ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಹಳೆಯ ವಾಹನಗಳ ಹೊಗೆಯಿಂದಾಗಿ ವಾಯುಮಾಲಿನ್ಯ ಉಂಟಾದ ಕಾರಣ ಸರ್ವೋಚ್ಚ ನ್ಯಾಯಾಲಯ 15 ವರ್ಷಗಳ ಹಿಂದಿನ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ತದನಂತರ 1.4.2017ರಲ್ಲಿ ರಾಷ್ಟ್ರಾದ್ಯಂತ ವಾಯುಮಾಲಿನ್ಯಕ್ಕೆ ಕಾರಣವಾಗಲಿರುವ ಬಿ.ಎಸ್.-4 ಮಾದರಿಯ ವಾಹನಗಳ ತಯಾರಿಕೆ ಹಾಗೂ ನೋಂದಣಿಯನ್ನು ಸ್ಥಗಿತಗೊಳಿಸುವಂತೆ ವಾಹನಗಳ ತಯಾರಿಕಾ ಸಂಸ್ಥೆ ಹಾಗೂ ಮಾರಾಟ ಸಂಸ್ಥೆಗಳಿಗೆ ಆದೇಶದ ಮೂಲಕ ಸೂಚನೆ ನೀಡಿತ್ತು. ನೂತನ ತಂತ್ರಜ್ಞಾನದ ಹೊಗೆರಹಿತ ಬಿ.ಎಸ್.-6 ಮಾದರಿಯ ವಾಹನಗಳನ್ನು ಮಾತ್ರ ಮಾರಾಟ, ನೋಂದಣಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.ಆದರೆ, ಅದಾಗಲೇ ಬಿ.ಎಸ್.-4 ಮಾದರಿಯ ಸಾಕಷ್ಟು ವಾಹನಗಳು ತಯಾರಾಗಿದ್ದು; ಮಾರಾಟವಾಗದೇ ಇದ್ದುದರಿಂದ ತಯಾರಿಕಾ ಸಂಸ್ಥೆಗಳು ಹಾಗೂ ಮಾರಾಟ ಸಂಸ್ಥೆಗಳು ಇನ್ನಷ್ಟು ಕಾಲಾವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ಇನ್ನಷ್ಟು ಕಾಲಾವಕಾಶ ನೀಡಲು ಸಾಧ್ಯವಾಗುವದಿಲ್ಲ; ನೀಡಿದ್ದ ಕಾಲಾವಕಾಶದಲ್ಲಿ ವಾಹನ ತಯಾರಿಕಾ ಸಂಸ್ಥೆಗಳು ನೂತನ ತಂತ್ರಜ್ಞಾನ ಬಳಸಿಕೊಳ್ಳಬಹುದಿತ್ತು ಎಂಬ ನಿರ್ದೇಶನದೊಂದಿಗೆ ಸಂವಿಧಾನದ ವಿಧಿ 142 ರಂತೆ ಇನ್ನು ಮುಂದಕ್ಕೆ ವಾಯು ಮಾಲಿನ್ಯಕ್ಕೆ ಕಾರಣವಾಗಲಿರುವ ಬಿ.ಎಸ್.-4 ಮಾದರಿಯ ಯಾವದೇ ವಾಹನಗಳ ತಯಾರಿಕೆ ಹಾಗೂ ನೋಂದಣಿ ಮಾಡುವಂತಿಲ್ಲ ಎಂದು ಆದೇಶಿಸಿದೆ. ಮಾರ್ಚ್ ತಿಂಗಳ 31ರವರೆಗೆ ಗಡುವು ನೀಡಿದ್ದು; ಏಪ್ರಿಲ್ 1ರ ಬಳಿಕ ಯಾವದೇ ಬಿ.ಎಸ್.-4 ಮಾದರಿಯ ವಾಹನಗಳ ನೋಂದಣಿ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಆದೇಶ ಪಾಲನೆ: ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕರಾದ ಶಿವಣ್ಣ ಅವರು, ಸದ್ಯಕ್ಕೆ ಬಿ.ಎಸ್.-4 ವಾಹನಗಳ ನೋಂದಣಿ ಮಾಡುತ್ತಿದ್ದೇವೆ. ಏ.1ರ ಬಳಿಕ ಯಾವದೇ ಕಾರಣಕ್ಕೂ ನೋಂದಣಿ ಮಾಡಲಾಗುವದಿಲ್ಲ. ಗ್ರಾಹಕರು ಅಂತಹ ವಾಹನಗಳನ್ನು ಹೊಂದಿದ್ದರೆ ನಿಗದಿತ ದಿನಾಂಕದೊಳಗಡೆ ನೋಂದಣಿ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ.

ನೋಟೀಸ್ ನೀಡುತ್ತಿದ್ದೇವೆ

ನ್ಯಾಯಾಲಯದ ಆದೇಶ ಬಂದಾಗಲೇ ಬಿ.ಎಸ್.-4 ವಾಹನಗಳ ತಯಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಎಲ್ಲವೂ ನೂತನ ಹೊಗೆರಹಿತ ಬಿ.ಎಸ್.-6 ತಂತ್ರಜ್ಞಾನದ ವಾಹನಗಳೇ ತಯಾರಾಗುತ್ತಿವೆ. ಆದರೂ ಬಿ.ಎಸ್.-4 ವಾಹನಗಳು ತಯಾರಾಗಿ ಮಾರಾಟಕ್ಕೆ ಬಾಕಿ ಉಳಿದವುಗಳನ್ನು ಮಾರಾಟ ಮಾಡಲು ಸಮಾಯಾವಕಾಶ ಕೋರಿ ತಯಾರಿಕಾ ಹಾಗೂ ಮಾರಾಟ ಸಂಸ್ಥೆಯವರು ನ್ಯಾಯಾಲಯವನ್ನು ಕೋರಿದ್ದರು. ಆದರೆ ನ್ಯಾಯಾಲಯ ಹೆಚ್ಚಿಗೆ ಸಮಾಯಾವಕಾಶ ನೀಡದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ತಿಂಗಳ ಅಂತ್ಯದೊಳಗೆ ಬಿ.ಎಸ್.-4 ಮಾಹನಗಳ ಮಾರಾಟ ಹಾಗೂ ನೋಂದಣಿ ಮಾಡಲು ಪ್ರಯತ್ನಿಸಲಾಗುತ್ತಿದೆ. ವಾಹನ ಖರೀದಿಸಿ, ನೋಂದಣಿ ಮಾಡಿಸಿಕೊಳ್ಳದೇ ಇರುವ ಗ್ರಾಹಕರಿಗೆ ನೋಟೀಸ್ ಜಾರಿ ಮಾಡಿ ಸೂಚನೆ ನೀಡಲಾಗುತ್ತಿದೆ ಎಂದು ಮಡಿಕೇರಿಯ ಮಾರುತಿ ವಾಹನ ಮಾರಾಟ ಸಂಸ್ಥೆಯ ವ್ಯವಸ್ಥಾಪಕ ಎಂ.ಎಸ್. ನವೀನ್ ಹೇಳುತ್ತಾರೆ.

ಈಗಾಗಲೇ ಹಳೆಯ ವಾಹನಗಳ ತಯಾರಿಕೆ ಸ್ಥಗಿತಗೊಳಿಸಲಾಗಿದೆ. ತಯಾರಾಗಿ ಮಾರಾಟಕ್ಕೆ ಕೆಲವೇ ಕೆಲವು ವಾಹನಗಳಿವೆ. ಆಫರ್‍ಗಳ ಮೂಲಕ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಮಾರ್ಚ್ ಅಂತ್ಯದೊಳಗೆ ಮಾರಾಟ ಹಾಗೂ ನೋಂದಣಿ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಯಾರಾದರೂ ಖರೀದಿ ಮಾಡಿ ನೋಂದಣಿ ಮಾಡಿಕೊಳ್ಳದಿದ್ದರೆ ಅವರುಗಳಿಗೆ ಸಮಸ್ಯೆಯಾಗಲಿದೆ ಎಂದು ಹುಂಡೈ ವಾಹನ ಮಾರಾಟ ಸಂಸ್ಥೆಯಾದ ಅದ್ವೈತ್ ಹುಂಡೈ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿಧಿ ಅವರು ಹೇಳಿದ್ದಾರೆ.

ಸಮಸ್ಯೆ ಏನು..?

ಈ ಹಿಂದೆ ನೋಂದಣಿ ಮಾಡುವ ಸಂದರ್ಭದಲ್ಲಿ ತೆರಿಗೆ, ಮತ್ತಿತರವನ್ನು ಪಾವತಿಸಬೇಕಿತ್ತು. ಹಾಗಾಗಿ ಕೆಲವರು ನೋಂದಣಿ ಮಾಡಿಸಿಕೊಳ್ಳದೆ ದಿನ ದೂಡುತ್ತಿದ್ದರೂ ಆದರೆ ಇದೀಗ ವಾಹನ ಖರೀದಿಸುವಾಗಲೇ ಎಲ್ಲವನ್ನೂ ಪಾವತಿ ಮಾಡಬೇಕಾಗಿದೆ. ಎಲ್ಲವೂ ಅನ್‍ಲೈನ್ ಮೂಲಕವೇ ಆಗಲಿದೆ. ಹಾಗಾಗಿ ನೋಂದಣಿ ಮಾಡಿಸಿಕೊಳ್ಳದೇ ಇರುವವರು ಇದೀಗ ತಾ. 31ರ ಒಳಗಡೆ ದಂಡ ಸಹಿತವಾಗಿ ನೋಂದಣಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಅಂತಹ ವಾಹನವನ್ನು ಚಲಾಯಿಸುವಂತಿಲ್ಲ. ತಪಾಸಣೆ ವೇಳೆ ನೋಂದಣಿಯಾಗದಿರುವದು ಕಂಡು ಬಂದರೆ ಅಂತಹ ವಾಹನಗಳನ್ನು ಆರ್‍ಟಿಓ ಅಥವಾ ಸಂಚಾರಿ ಪೊಲೀಸರು ವಶಪಡಿಸಿಕೊಳ್ಳುವ ಅವಕಾಶವಿದೆ. ಇಲ್ಲವಾದಲ್ಲಿ ನೋಂದಣಿ ಮಾಡಿಸಿಕೊಳ್ಳದೆ ವಾಹನವನ್ನು ಮನೆಯಲ್ಲಿಯೇ ಇರಿಸಿಕೊಳ್ಳಬೇಕು ಅಥವಾ ಗುಜರಿಗೆ ನೀಡಬೇಕಾಗುತ್ತದೆ.

ನೋಂದಣಿ ಫಲಕ

ಈ ಮೊದಲು ವಾಹನಗಳ ನೋಂದಣಿಯಾದ ಬಳಿಕ ಗ್ರಾಹಕರಿಗೆ ಇಷ್ಟಬಂದ ಹಾಗೆ ನೋಂದಣಿ ಫಲಕಗಳಲ್ಲಿ ಸಂಖ್ಯೆಗಳನ್ನು, ಚಿತ್ರಗಳನ್ನು, ಲೋಗೋಗಳನ್ನು ಅಳವಡಿಸಿಕೊಳ್ಳಬಹುದಿತ್ತು. ಆದರೆ ಇದೀಗ ಯಾವದೂ ಆಗುವದಿಲ್ಲ. Iಓಆ ಎಂಬ ಮುದ್ರೆಯಿರುವ ಸಂಖ್ಯೆಗಳಲ್ಲೂ ಸಣ್ಣದಾಗಿ IಓಆIಂ ಎಂಬ ಪದಗಳಿರುವ ಜೊತೆಗೆ IಓಆIಂ ಎಂಬ ಅಕ್ಷರಗಳಿರುವ ಸಿಲ್ವರ್ ಬಣ್ಣದ ಸ್ಟಿಕ್ಕರ್ ಇರುವ ಫಲಕಗಳನ್ನೇ ಅಳವಡಿಸಬೇಕಾಗಿದೆ. ಹೊಸದಾಗಿ ವಾಹನ ಖರೀದಿಸಿದರೆ ಖರೀದಿ ಮಾಡಿದ ಮಾರಾಟ ಸಂಸ್ಥೆಯವರೇ ನೋಂದಣಿ ವೆಚ್ಚದೊಂದಿಗೆ ಫಲಕವನ್ನೂ ಅಳವಡಿಸಿಕೊಡುತ್ತಾರೆ. ಎಲ್ಲವೂ ಆನ್‍ಲೈನ್ ಪ್ರಕ್ರಿಯೆಯಾಗಿರುತ್ತದೆ. ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ ಹಳೆಯ ವಾಹನಗಳಿಗೂ Iಓಆ ಮುದ್ರೆಯಿರುವ ಫಲಕಗಳು ಕಡ್ಡಾಯವಾಗಿದ್ದು; ಎಲ್ಲರೂ ಕೂಡ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಗ್ರಾಹಕರು ಈ ಬಗ್ಗೆಯೂ ಗಮನ ಹರಿಸುವದು ಅತ್ಯವಶ್ಯವಾಗಿದೆ. - ಸಂತೋಷ್