ವೀರಾಜಪೇಟೆ, ಮಾ. 13: ರಾಷ್ಟ್ರದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಅಭಿಪ್ರಾಯ ಪಟ್ಟರು.
ಕಾಲೇಜಿನಲ್ಲಿ ಮಹಿಳಾ ಘಟಕದ ವತಿಯಿಂದ ಆಯೋಜಿಸ ಲಾಗಿದ್ದ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಎಲ್ಲಾ ರಂಗದಲ್ಲೂ ಮಹಿಳೆಯರು ಮುಂದಿದ್ದು ಶಿಕ್ಷಣವನ್ನು ಪಡೆಯುವುದರ ಜೊತೆಗೆ ಸಾಮಾಜಿಕ ವಾಗಿಯೂ ಗುರುತಿಸಿಕೊಂಡಿದ್ದಾರೆ. ದೇಶದ ಪ್ರಮುಖ ಹುದ್ದೆಗಳಲ್ಲೂ ಮಹಿಳೆಯರಿದ್ದು ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.
ಸಂತ ಅನ್ನಮ್ಮ ಪ್ರೌಢ ಶಾಲೆಯ ಶಿಕ್ಷಕಿ ಸಲೊಮಿ ಮಾತ ನಾಡಿ, ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿದ್ದಾರೆ. ಪ್ರತಿಯೊಬ್ಬರೂ ಹೆಣ್ಣನ್ನು ಗೌರವಿಸಿ ಪೂಜನೀಯ ಭಾವದಿಂದ ನೋಡು ವಂತಾಗಬೇಕು ಎಂದರು.
ಕಾಲೇಜಿನ ಐ.ಕ್ಯೂ.ಎ.ಸಿ. ಘಟಕದ ಸಂಯೋಜಕರಾದ ತೃಪ್ತಿ ಬೋಪಣ್ಣ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಮಹಿಳೆಯರು ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಮುತ್ತಮ್ಮ ಹಾಜರಿದ್ದರು. ಎನ್.ಎಸ್.ಎಸ್. ಅಧಿಕಾರಿ ಅರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ನಿಖಿಲ್ ಸ್ವಾಗತಿಸಿದರೆ, ಸಂಕೇತ್ ನಿರೂಪಿಸಿ, ಪ್ರಮೋದ್ ವಂದಿಸಿದರು.