ಗೋಣಿಕೊಪ್ಪಲು, ಮಾ. 13: ಆ ಗ್ರಾಮದಲ್ಲಿ 60 ರಿಂದ 95 ವರ್ಷದ ಆಸುಪಾಸಿನಲ್ಲಿರುವ ವೃದ್ಧ್ದರು ಜೀವನ ಸಾಗಿಸುತ್ತಿದ್ದಾರೆ. ಗ್ರಾಮದ ವ್ಯವಸ್ಥೆಯನ್ನು ಒಪ್ಪಿಕೊಳ್ಳದೆ ಇವರ ಮಕ್ಕಳು ದೂರದ ನಗರ ಪ್ರದೇಶದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ವೃದ್ಧರು ಮಾತ್ರ ಭೂಮಿ ತಾಯಿಯನ್ನು ನಂಬಿ ಕೃಷಿ ಚಟುವಟಿಕೆ ಮುಂದುವರೆಸುತ್ತಿದ್ದಾರೆ. ಇಲ್ಲಿರುವ ಕುಟುಂಬಗಳಿಗೆ ಖಾತೆಯಾಗಿರುವ ಭೂಮಿಯಿದೆ. ದಿನ ನಿತ್ಯ ಕಷ್ಟ ಎದುರಿಸುತ್ತಿರುವ ಇಲ್ಲಿಯ ಜನತೆ 137 ವರ್ಷಗಳ ಹಿಂದೆಯೇ ತಮ್ಮ ಬದುಕನ್ನು ಕಟ್ಟಿಕೊಂಡವರು.
ಕೊಡಗಿನ ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಕುಂಬಾರಗಡಿಗೆ ಎಂಬ ಗ್ರಾಮದಲ್ಲಿ 117ಕ್ಕೂ ಅಧಿಕ ಮೂಲ ನಿವಾಸಿಗಳು ರೈತಾಪಿ ಜೀವನ ಇಂದಿಗೂ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ 30 ಕಿ.ಮೀ. ದೂರದ ಈ ಗ್ರಾಮವನ್ನು ಜಿಲ್ಲಾಡಳಿತÀ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಮರೆತಂತಿದೆ. ಕಿ.ಮೀ ದೂರದ ಅಲ್ಲಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿಯ ಕುಟುಂಬಗಳಿಗೆ ಇನ್ನು ಕೂಡ ವಿದ್ಯುತ್ ಸೌಕರ್ಯ ಲಭಿಸದಿರುವುದು ನಮ್ಮ ಆಡಳಿತಕ್ಕಿಡಿದ ಕೈಗನ್ನಡಿಯಾಗಿದೆ. ಗ್ರಾಮದ ಮನೆಗಳಿಗೆ ತೆರಳಲು ಸರಿಯಾದ ರಸ್ತೆಗಳಿಲ್ಲ, ಇಲ್ಲಿಯ ತನಕ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದತ್ತ ಮುಖವಂತೂ ಹಾಕಿದಂತಿಲ್ಲ.
ಗ್ರಾಮದಿಂದ ನಗರಕ್ಕೆ ಪ್ರಯಾಣ ಬೆಳೆಸಬೇಕಾದರೆ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಮುಖ್ಯ ರಸ್ತೆಗೆ ಬರುವ ಕೆಲವು ಬಸ್ ಸಂಪರ್ಕಕ್ಕಾಗಿ ಕಾಲು ಹಾದಿಯನ್ನು ಕಿ.ಮೀ.ಗಳಲ್ಲಿ ನಡೆದೆ ಮುಖ್ಯ ರಸ್ತೆಗೆ ತಲುಪಬೇಕು. ಈ ಕುಗ್ರಾಮಕ್ಕೆ ತೆರಳಲು ರಸ್ತೆ ಸಂಚಾರವಿಲ್ಲದ ಕಾರಣ ಯಾವುದೇ ವಾಹನಗಳು ಇಲ್ಲಿಗೆ ಬರುತ್ತಿಲ್ಲ. ಜೀಪುಗಳು ಬಂದರೂ ದುಪ್ಪಟ್ಟು ದರ ನೀಡಬೇಕು.ಇದರಿಂದಾಗಿಯೇ ಇಲ್ಲಿಯ ಗ್ರಾಮಸ್ಥರು ನಡೆದುಕೊಂಡೆ ಓಡಾಡುವ ಪರಿಸ್ಥಿತಿ ಮಾಮೂಲಿಯಾಗಿದೆ.
ಇಲ್ಲಿಯ ಕುಟುಂಬಗಳು ವ್ಯವಸಾಯವನ್ನು ನಂಬಿಕೊಂಡಿದ್ದಾರೆ. ಗದ್ದೆಗಳಲ್ಲಿ ಭತ್ತ ಹೊರತುಪಡಿಸಿದರೆ ಬೇಸಿಗೆ ಕಾಲದಲ್ಲಿ ತರಕಾರಿಗಳನ್ನು ಉಪ ಬೆಳೆಯಾಗಿ ಬೆಳೆಯುತ್ತಾರೆ. ಬೆಳೆದ ತರಕಾರಿ ಬೆಳೆಗಳನ್ನು ದೂರದ ಮಡಿಕೇರಿ ಹಾಗೂ ಸೋಮವಾರಪೇಟೆಯ ಸಂತೆ ದಿನದಂದು ಮಾರ್ಕೆಟ್‍ಗೆ ತೆರಳಿ ವ್ಯಾಪಾರ ನಡೆಸುತ್ತ ಸಿಗುವ ಅಲ್ಪ ಸ್ವಲ್ವ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಕೆಲವು ಮಂದಿ ಹಸು ಸಾಕಾಣಿಕೆಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಬೆಳೆದ ತರಕಾರಿ ಬೆಳೆಗಳನ್ನು ಕುಕ್ಕೆಗೆ ತುಂಬಿಸಿ ತಲೆ ಮೇಲೆ ಹೊತ್ತು ಗ್ರಾಮದಿಂದ ಹೊರಡುವ ಇಲ್ಲಿಯ ರೈತರು ಮುಖ್ಯ ರಸ್ತೆಗೆ ತಲುಪಲು ಕನಿಷ್ಟ 4,5 ಕಿ.ಮೀ.ಕಾಲ್ನಡಿಗೆಯಿಂದಲೇ ನಡೆದು ಮುಖ್ಯ ರಸ್ತೆಗೆ ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ. ನಂತರ ವಿವಿಧ ಊರುಗಳಿಗೆ ಬಸ್‍ನಲ್ಲಿ ತೆರಳಿ ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡುತ್ತಾರೆ.
ಮೊಬೈಲ್ ನ್ಯಾಯಬೆಲೆ ಅಂಗಡಿಗಳು ಈ ಭಾಗಕ್ಕೆ ತೆರಳಿದರೂ ಗ್ರಾಮದ ಜನತೆ ಹಲವು ಕಿ.ಮೀ. ನಡೆದುಕೊಂಡೆ ಆಗಮಿಸಿ ಮಾಸಿಕ ಸಿಗುವ ಪಡಿತರ ವಸ್ತುಗಳನ್ನು ಪಡೆದುಕೊಂಡು ತಲೆ ಮೇಲೆ ಹೊತ್ತು ತೆರಳಬೇಕಾದ ಪರಿಸ್ಥಿತಿ ಮಾಮೂಲಿಯಾಗಿದೆ. ಕವಲು ದಾರಿಗಳಲ್ಲೆ ನಡೆದುಕೊಂಡು ತಮ್ಮ ಜೋಪುಡಿಗಳಿಗೆ ತೆರಳುವ ಇಲ್ಲಿಯ ಮಂದಿ ಆರೋಗ್ಯದ ಸಮಸ್ಯೆ ಎದುರಾಗಿ ಯಾರಾದರು ಮೃತಪಟ್ಟರೆ ಈ ವಿಷಯವನ್ನು ತಿಳಿಯಲು ದಿನಗಳೇ ಕಳೆದ ಉದಾಹರಣೆಗಳು ಇಲ್ಲಿವೆ. ಅನಾರೋಗ್ಯದಿಂದ ಬಳಲಿ ನಡೆಯಲು ಸಾಧ್ಯವಿಲ್ಲದವರನ್ನು ಮರದ ಬಡಿಗೆಯಲ್ಲಿ ಎತ್ತಿಕೊಂಡು ಹೋಗುವ ಸ್ಥಿತಿ. ಕಷ್ಟದ ಬದುಕಿನಲ್ಲಿಯೆ ಮೊಣ್ಣಂಡ ಪೂವಯ್ಯನವರ ಮೊಮ್ಮಗ ವಿದ್ಯಾಭ್ಯಾಸ ಪೂರೈಸಿ ಕೂರ್ಗ್ ರೆಜಿಮೆಂಟ್‍ನಲ್ಲಿ ಸಿಪಾಯಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇಲ್ಲಿಯ ಪ್ರತಿ ಕುಟುಂಬಗಳಿಗೆ ಆರ್‍ಟಿಸಿಯ ದಾಖಲೆಗಳಿದ್ದು ನೂರಾರು ಎಕರೆ ಭೂಮಿ, ತೋಟಗಳಿವೆ. ಆದರೆ ಒಂದೆ ಕುಟುಂಬದಲ್ಲಿ 25ರಿಂದ 30ರವರೆಗೆ ಕುಟುಂಬಸ್ಥರ ಹೆಸರು ಆರ್‍ಟಿಸಿಯಲ್ಲಿ ನಮೂದಾಗಿರುವುದರಿಂದ ಸರ್ಕಾರದ ಪ್ರಯೋಜನಗಳು ಕೇವಲ ಪಟ್ಟೆದಾರನಿಗೆ ಮಾತ್ರ ಲಭ್ಯವಾಗುತ್ತಿದೆ! ಆರ್‍ಟಿಸಿಗಳನ್ನು ಸರಿಪಡಿಸಿಕೊಳ್ಳುವ ಅವಕಾಶದಿಂದ ಇಲ್ಲಿಯ ಕುಟುಂಬಗಳು ಸಂಪೂರ್ಣ ವಂಚಿತರಾಗಿದ್ದಾರೆ. ವಿದ್ಯಾಭ್ಯಾಸದ ಕೊರತೆ ಒಂದೆಡೆಯಾದರೆ, ಕಂದಾಯ ಇಲಾಖೆಗಳನ್ನು ನೋಡಿಯೆ ಇಲ್ಲದ ವೃದ್ಧರು ಇಲ್ಲಿದ್ದಾರೆ. ಸಂಕಷ್ಟದ ನಡುವೆ ಇರುವ ಭೂಮಿಯನ್ನು ಉತ್ತಿ, ಬಿತ್ತಿ ನಾಟಿ ಮಾಡಿ ಭತ್ತವನ್ನು ಮೂಲ ಬೆಳೆಯಾಗಿ ಬೆಳೆಯುತ್ತಾರೆ. ಉಪ ಬೆಳೆಯಾಗಿ ಏಲಕ್ಕಿ, ಕಾಫಿ, ತರಕಾರಿ ಬೆಳೆಯುತ್ತಿದ್ದಾರೆ. ದಾಖಲೆ ಪ್ರಕಾರ ಸ್ವಾತಂತ್ರ್ಯ ಪೂರ್ವದ 1925ನೇ ಇಸವಿಯಲ್ಲಿ ಇಲ್ಲಿಯ ಮೂಲ ನಿವಾಸಿಗಳು ನೆಲೆ ನಿಂತಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಮೂಲ ನಿವಾಸಿಗಳ ಕುಟುಂಬಗಳು ಇಲ್ಲಿಯ ತನಕ ಮೂಲಭೂತ ಸೌಕರ್ಯಗಳು ದೊರೆಯದೆ ಸಂಕಷ್ಟದಲ್ಲಿವೆ.
2018-19ನೇ ಸಾಲಿನಲ್ಲಿ ಕೊಡಗಿಗೆ ನೆರೆ ಸಂಭವಿಸಿದ ಸಂದರ್ಭ ಈ ಗ್ರಾಮದಲ್ಲಿ ಕೃಷಿ ಮಾಡುವ ಭತ್ತದ ಗದ್ದೆಗಳಿಗೆ ಮಣ್ಣು ತುಂಬಿ ಇಲ್ಲಿಯ ನಿವಾಸಿಗಳು ಭತ್ತ ಬೆಳೆಯಲಾರದ ಪರಿಸ್ಥಿತಿಗೆ ತಲುಪಿದ್ದಾರೆ. ಈಗಲೂ ಹತ್ತು ಅಡಿಗೂ ಅಧಿಕ ಮಣ್ಣು ರಾಶಿ ನಿಂತಿದ್ದು ಗದ್ದೆಗಳು ಗುಡ್ಡದಂತಾಗಿದೆ. ನೆರೆ ಹಾವಳಿ ಸಂದರ್ಭ ಕುಂಬಾರ ಗಡಿಗೆಯು ಕುಗ್ರಾಮವಾದ ಕಾರಣ ಈ ಸುದ್ದಿಯು ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಅಧಿಕಾರಿಗಳು ಕೂಡ ಇತ್ತ ಸುಳಿಯಲಿಲ್ಲ. ಮೊಬೈಲ್ ನೆಟ್‍ವರ್ಕ್‍ಗಳು ಈ ಭಾಗದಲ್ಲಿ ಇಲ್ಲದಿರುವುದರಿಂದ ಯಾವುದೆ ಚಿತ್ರಗಳು ಸೆರೆಯಾಗಿರಲಿಲ್ಲ. ಅಧಿಕಾರಿಗಳಿಗೆ ಇಂತಹದೊಂದು ಗ್ರಾಮ ಈ ಭಾಗದಲ್ಲಿದೆ ಎಂಬುದನ್ನೇ ಮರೆತಿದ್ದಾರೆ. ವರ್ಷಕ್ಕೆ ಎರಡು ಭತ್ತದ ಬೆಳೆ ಬೆಳೆಯುತ್ತಿದ್ದ ಈ ಭಾಗದ ಮೂಲ ನಿವಾಸಿಗಳು ಇದೀಗ ಭತ್ತದ ಬೆಳೆ ಬೆಳೆಯಲಾರದ ಪರಿಸ್ಥಿತಿಗೆ ಬಂದಿದ್ದಾರೆ.
ಆಧುನಿಕ ಪ್ರಪಂಚ ಮುಂದುವರೆದಿದ್ದರೂ ಇಲ್ಲಿಯ ಜನರು ಇಂದಿಗೂ ಕೂಡ ದಿನ ಉಪಯೋಗಕ್ಕೆ ಬಳಸುವ ಅಕ್ಕಿ ಹಿಟ್ಟುಗಳನ್ನು ತಾವೇ ತಮ್ಮ ಬೀಸುವ ಕಲ್ಲಿನಲ್ಲಿ ಹುಡಿ ಮಾಡಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಭತ್ತವನ್ನು ಕುಟ್ಟಿ ಅಕ್ಕಿ ಮಾಡಿಕೊಳ್ಳುತ್ತಿದ್ದಾರೆ.