ಕುಶಾಲನಗರ, ಮಾ 13: ಬೈಲುಕೊಪ್ಪ ಟಿಬೇಟಿಯನ್ ಕೇಂದ್ರದಲ್ಲಿ ಯಾವುದೇ ಕೊರೋನ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ಸ್ಪಷ್ಟಪಡಿಸಿದೆ. ಬೈಲುಕೊಪ್ಪದಲ್ಲಿ ಸೋಂಕು ಪತ್ತೆಯಾಗಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಬೈಲುಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಕುಮಾರ್, ಜನವರಿ 15 ರಿಂದ ಬೈಲುಕೊಪ್ಪ ಟಿಬೇಟಿಯನ್ ಕೇಂದ್ರಕ್ಕೆ ಭೇಟಿ ನೀಡುವ ವಿದೇಶಿಯರ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸುತ್ತಿದ್ದು, ಇದುವರೆಗೆ 108 ಜನ ವಿದೇಶಿಯರು ಸೇರಿದಂತೆ 400ಕ್ಕೂ ಅಧಿಕ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಾವುದೇ ರೀತಿಯ ಸೋಂಕು ಇರುವುದಿಲ್ಲ ಎಂದು ತಿಳಿಸಿರುವ ಡಾ.ಶಿವಕುಮಾರ್, ಪ್ರಸಕ್ತ ಟಿಬೇಟಿಯನ್ ಶಿಬಿರಕ್ಕೆ ಯಾವುದೇ ವಿದೇಶಿಯರಿಗೆ ಭೇಟಿ ನೀಡಲು ಅವಕಾಶ ನಿರ್ಬಂಧಿಸಲಾಗಿದೆ. ಶಿಬಿರದಿಂದ ವಿದೇಶಕ್ಕೆ ತೆರಳುವ ವ್ಯಕ್ತಿಗಳ ಪ್ರಯಾಣವನ್ನು ಕೂಡ ಮುಂದೂಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೈಲುಕೊಪ್ಪ ಟಿಬೇಟಿಯನ್ ಶಿಬಿರಕ್ಕೆ ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಆಗಾಗ್ಯೆ ಭೇಟಿ ನೀಡುತ್ತಿದ್ದು ಕೊರೋನ ಸೋಂಕಿನ ಬಗ್ಗೆ ಹಲವು ಸಭೆಗಳ ಮೂಲಕ ಅರಿವು, ಜಾಗೃತಿ ಮೂಡಿಸಲಾಗಿದೆ. ಬೈಲುಕೊಪ್ಪ ಸೇರಿದಂತೆ ಕೊಪ್ಪ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಮಚಂದ್ರ ಮತ್ತು ಸಿಬ್ಬಂದಿಗಳ ತಂಡ ಶಿಬಿರದ ಬಗ್ಗೆ ನಿಗಾವಹಿಸುತ್ತಿದೆ ಎಂದು ಡಾ. ಶಿವಕುಮಾರ್ ತಿಳಿಸಿದ್ದಾರೆ.