ಸಿದ್ದಾಪುರ, ಮಾ. 13: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ನದಿ ತೀರದ ಸಂತ್ರಸ್ತರಿಗೆ ಹಾಗೂ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬಿ.ಶೆಟ್ಟಿಗೇರಿಯಲ್ಲಿ ಜಿಲ್ಲಾಡಳಿತ ಗುರುತಿಸಿದ ಜಾಗವನ್ನು ಬದಲಾಯಿಸಬೇಕೆಂದು ಸಿ.ಪಿ.ಐ.(ಎಂ) ಪಕ್ಷದ ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಸುಮಾರು 35 ಕಿ.ಮೀ. ದೂರವಿರುವ ಬಿ. ಶೆಟ್ಟಿಗೇರಿಗೆ ಸಂತ್ರಸ್ತರನ್ನು ಸ್ಥಳಾಂತರಗೊಳಿಸುವುದು ಸರಿಯಾದ ಕ್ರಮವಲ್ಲ, ಬಿ.ಶೆಟ್ಟಿಗೇರಿ ಜಾಗಕ್ಕಿಂತಲೂ ಮಾಲ್ದಾರೆಯ ಅಸ್ತಾನ ಜಾಗವು ಉತ್ತಮ ಜಾಗವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿ.ಪಿ.ಐ (ಎಂ) ಪಕ್ಷ ಮುಖಂಡ ಮುಸ್ತಫ ಮಾತನಾಡಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸಂತ್ರಸ್ತರು ಗುಹ್ಯ ಗ್ರಾಮದಲ್ಲಿ ಪ್ರತಿಭಟನೆ ನಡೆಸುವ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಸಿದ್ದಾಪುರ ವ್ಯಾಪ್ತಿಯಲ್ಲಿ ಸರ್ಕಾರಿ ಒತ್ತುವರಿ ಭೂಮಿಯನ್ನು ಗುರುತಿಸಿ ಅವುಗಳನ್ನು ವಶಪಡಿಸಿಕೊಂಡು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಈ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಆರೋಪಿಸಿದರು.

ಸಿ.ಪಿ.ಐ (ಎಂ) ಪಕ್ಷದ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಸಿ.ಪಿ.ಐ (ಎಂ) ಪಕ್ಷದ ಪದಾಧಿಕಾರಿ ಬೈಜು ಹಾಜರಿದ್ದರು.