*ಸಿದ್ದಾಪುರ, ಮಾ. 13: ಸರ್ಕಾರದ ಚಿಂತನೆಗಳೇ ಹೀಗೆ, ಹೊಸ ಯೋಜನೆಯೊಂದು ಸಾಕಾರ ಗೊಂಡರೆ ಹಳೆಯ ವ್ಯವಸ್ಥೆಗೆ ಎಳ್ಳುನೀರು ಬಿಡುವುದೇ ಹೆಚ್ಚು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಟ್ಟಡಗಳು ಮತ್ತು ಅವುಗಳಿರುವ ಪ್ರದೇಶದ ಗತಿ ಕೂಡ ಇದೇ ಆಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಸಿದ್ದಾಪುರದ ಹೃದಯ ಭಾಗದಲ್ಲಿದ್ದ ಹಳೆಯ ಪೊಲೀಸ್ ಠಾಣೆಯ ಕಟ್ಟಡ ಇದೀಗ ಅನಾಥವಾಗಿದೆ. ಬೀಗ ಜಡಿದ ಕಟ್ಟಡದ ಸುತ್ತ ಕುರುಚಲು ಗಿಡಗಳು ಬೆಳೆಯಲಾರಂಬಿಸಿದ್ದು, ಕಟ್ಟಡ ಮತ್ತಷ್ಟು ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡದೊಳಗೆ ಹಾವು, ಹೆಗ್ಗಣಗಳು ಓಡಾಡುವುದನ್ನು ಸ್ಥಳೀಯರು ನೋಡಿದ್ದಾರೆ. ಮಳೆಗಾಲದಲ್ಲಿ ಹಳೆಯ ಕಟ್ಟಡ ಸಂಪೂರ್ಣವಾಗಿ ಹಾನಿಗೀಡಾಗುವ ಮುನ್ಸೂಚನೆಯನ್ನು ನೀಡಿದೆ.
ಈ ಕಟ್ಟಡದಲ್ಲಿ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿದ್ದಾಗ ಸಿದ್ದಾಪುರ ಪಟ್ಟಣದ ಸುತ್ತಮುತ್ತಲ ಚಿತ್ರಣ ಪೊಲೀಸರಿಗೆ ಸುಲಭವಾಗಿ ತಿಳಿದು ಬಿಡುತಿತ್ತು. ಅಲ್ಲದೆ ಅಪರಾಧ ಪ್ರಕರಣಗಳನ್ನು ತಕ್ಷಣ ನಿಯಂತ್ರಿ ಸುವುದಕ್ಕೂ ಸಹಕಾರಿಯಾಗಿತ್ತು. ಆದರೆ ಈಗ ಎಂ.ಜಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಪೊಲೀಸ್ ಇಲಾಖೆಯ ನೂತನ ಕಟ್ಟಡಕ್ಕೆ ಪೊಲೀಸ್ ಠಾಣೆ ಸ್ಥಳಾಂತರ ಗೊಂಡಿದ್ದು, ಹಳೆಯ ಠಾಣೆಯ ಕಟ್ಟಡ ಕಾಡು ಪಾಲಾಗುವ ಸ್ಥಿತಿಯಲ್ಲಿದೆ.
ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಗ್ರಾಮಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದು, ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಿದ್ದಾಪುರ, ಪಾಲಿಬೆಟ್ಟ, ಚೆನ್ನಯ್ಯನ ಕೋಟೆ, ಕಳತ್ಮಾಡು, ಮಾಲ್ದಾರೆ, ಕೊಂಡಂಗೇರಿ, ಹಾಲು ಗುಂದ, ಅರೆಕಾಡು, ವಾಲ್ನೂರು-ತ್ಯಾಗತ್ತೂರು ಗ್ರಾಮಗಳು ಒಳ ಪಡುತ್ತವೆ. ಹೆಚ್ಚಿನ ಗ್ರಾಮಗಳು ಮತ್ತು ಹೆಚ್ಚಿನ ಜನಸಂಖ್ಯೆ ಇರುವುದರಿಂದ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳ ಅಗತ್ಯತೆ ಇದೆ.
ಈ ಪ್ರದೇಶದಲ್ಲಿ ಅಶಾಂತಿಯ ವಾತಾವರಣ ಮೂಡಿದಾಗ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವುದು ವಾಡಿಕೆ. ಹೀಗೆ ನಿಯೋಜನೆಗೊಳ್ಳುವ ಜಿಲ್ಲಾ ಸಶಸ್ತ್ರ ಪಡೆಯ ಸಿಬ್ಬಂದಿಗಳಿಗೆ ಸಿದ್ದಾಪುರದಲ್ಲಿ ತಂಗಲು ಸೂಕ್ತ ವ್ಯವಸ್ಥೆಗಳು ಇಲ್ಲದ ಪರಿಸ್ಥಿತಿ ಹಿಂದಿನಿಂದಲೂ ಕಾಡುತ್ತಿದೆ. ಅಲ್ಲದೆ ನಿತ್ಯ ಠಾಣಾ ಕರ್ತವ್ಯಕ್ಕೆ ಹಾಜರಾಗುವ ಪೊಲೀಸ್ ಸಿಬ್ಬಂದಿಗಳಿಗೂ ವಸತಿ ವ್ಯವಸ್ಥೆಯ ಕೊರತೆ ಇದೆ.
ಆದ್ದರಿಂದ ದಕ್ಷ ಅಧಿಕಾರಿ ಎನಿಸಿಕೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಳೆಯ ಪೊಲೀಸ್ ಠಾಣೆಯ ಕಟ್ಟಡವನ್ನು ಮತ್ತು ಅದು ಇರುವ ಪ್ರದೇಶವನ್ನು ಸದ್ಬಳಕೆ ಮಾಡಿ ಕೊಳ್ಳಲು ಯೋಜನೆ ರೂಪಿಸಬೇಕಾಗಿದೆ.
ಪಟ್ಟಣದ ಹೃದಯ ಭಾಗದಲ್ಲೇ ಬೆಲೆ ಬಾಳುವ ಜಾಗವಿರುವುದರಿಂದ ಪೊಲೀಸ್ ಸಿಬ್ಬಂದಿಗಳಿಗಾಗಿ ವಸತಿ ಗೃಹವನ್ನು ನಿರ್ಮಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಸ್ಥಳೀಯರಿಂದ ಕೇಳಿ ಬಂದಿದೆ. ಅನೇಕ ಮಂದಿ ಅವಿವಾಹಿತ ಯುವ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಇವರುಗಳು ತಂಗಲು ಅತಿಥಿಗೃಹ ಸಹಕಾರಿಯಾಗಲಿದೆ. ಆದ್ದರಿಂದ ಸರ್ಕಾರದ ಭೂಮಿ ಒತ್ತುವರಿಯಾ ಗುವುದನ್ನು ಮತ್ತು ಹಳೆಯ ಕಟ್ಟಡ ಹಾನಿಗೀಡಾಗುವುದನ್ನು ತಪ್ಪಿಸಲು ಸುಸಜ್ಜಿತ ಹಾಗೂ ಎಲ್ಲಾ ಸೌಲಭ್ಯ ಗಳಿರುವ ವಸತಿಗೃಹದ ಯೋಜನೆಗೆ ಹಿರಿಯ ಅಧಿಕಾರಿಗಳು ಮುಂದಾಗ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೊಸ ಯೋಜನೆ ಯೊಂದು ಸಾಕಾರಗೊಂಡಾಗ ಹಳೆಯ ವ್ಯವಸ್ಥೆಯನ್ನು ನಿರ್ಲಕ್ಷಿಸು ವುದು ಸರಿಯಲ್ಲವೆಂದು ಅಭಿಪ್ರಾಯ ಪಟ್ಟಿರುವ ಹಿರಿಯ ನಾಗರೀಕರು, ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ವಸತಿಗೃಹದ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
- ಅಂಚೆಮನೆ ಸುಧಿ