ಸಿದ್ದಾಪುರ, ಮಾ.13: ಕಾಫಿ ಕಣದಲ್ಲಿ ಕಾವಲುಗಾರನಾಗಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯ ಗೊಳಿಸಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ತಾ. 12ರ ರಾತ್ರಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಬಿ.ಬಿ.ಟಿ.ಸಿ ಕಂಪೆನಿಗೆ ಸೇರಿದ ತೂಬನಕೊಲ್ಲಿ ಕಾಫಿ ತೋಟದ ಕಾಫಿ ಕಣದಲ್ಲಿ ರಾತ್ರಿ ಸಮಯದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಶೇಖರ್ (45) ಎಂಬವರು ರಾತ್ರಿ 7.30ರ ಸಮಯಕ್ಕೆ ಕೆಲಸದಲ್ಲಿ ಮಗ್ನನಾಗಿರುವ ಸಂದರ್ಭ ಕಣದಲ್ಲಿದ್ದ ವಿದ್ಯುತ್ ಸ್ಥಗಿತಗೊಂಡಿತ್ತು. ಈ ಸಂದರ್ಭ ಕತ್ತಲೆ ಆದ ಕಾರಣ ಸಮೀಪದ ಕಾಫಿ ತೋಟವೊಂದರಿಂದ ಹಠಾತನೆ ಒಂಟಿ ಸಲಗವೊಂದು ಶೇಖರನ ಮೇಲೆ ದಾಳಿ ನಡೆಸಿತು ಎನ್ನಲಾಗಿದೆ. ಕಾಡಾನೆಯು ಶೇಖರನನ್ನು ಕಾಲಿನಿಂದ ತುಳಿದು ಎತ್ತಿ ಎಸೆದಿರುವ ಪರಿಣಾಮ ಶೇಖರನ ಸೊಂಟ ಹಾಗೂ ಬೆನ್ನಿನ ಭಾಗಕ್ಕೆ ಹಾಗೂ ಹಣೆಗೆ ಗಂಭೀರ ಗಾಯವಾಗಿರುತ್ತದೆ. ಶೇಖರನೊಂದಿಗೆ ಕಾವಲು ಕಾಯುತ್ತಿದ್ದ ಇನ್ನೋರ್ವ ಕಾರ್ಮಿಕನು ಕೆಲಸದ ನಿಮಿತ್ತ ಸಮೀಪಕ್ಕೆ ತೆರಳಿದ್ದನು. ನಂತರ ಕಣದಲ್ಲಿ ಬಂದು ಶೇಖರನನ್ನು ಹುಡುಕಿದಾಗ ಶೇಖರನು ದೂರದಲ್ಲಿ ನರಳಾಡುತ್ತಿರುವ ಶಬ್ದವು ಕೇಳಿ ಬಂದಿದೆ ಎನ್ನಲಾಗಿದೆ. ಕೂಡಲೇ ಆ ಕಾರ್ಮಿಕನು ಸಮೀಪದ ಇತರ ಕಾರ್ಮಿಕರನ್ನು ಕರೆದು ಶೇಖರನನ್ನು ಎತ್ತಿಕೊಂಡು ಹೋದರು. ನಂತರ ವಾಹನವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಗಾಯಾಳುವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಬೆನ್ನಿನ ಮೂಳೆ ಮುರಿದು ಹೋಗಿರುವ ಕಾರಣ ಗಾಯಾಳು ಶೇಖರ್‍ಗೆ ಮೇಲಕ್ಕೆ ಎದ್ದೇಳಲು ಆಗದೇ ಆಹಾರವನ್ನು ಕೂಡ ಸೇವಿಸಲು ಆಗುತ್ತಿಲ್ಲವೆಂದು ಕುಟುಂಬಸ್ಥರು ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೆ ಅರಣ್ಯ ಇಲಾಖೆಗೆ ಕೂಡ ದೂರು ನೀಡಲಾಗಿದೆ.
ದಾಳಿ ನಡೆಸಿದ ಜಾಗಕ್ಕೆ ಮತ್ತೆ ಬಂದ ಕಾಡಾನೆ!! : ಕಾವಲುಗಾರ ಶೇಖರನ ಮೇಲೆ ಕಾಫಿ ಕಣದಲ್ಲಿ ದಾಳಿ ನಡೆಸಿದ ಕಾಡಾನೆಯು ದಾಳಿ ನಡೆಸಿದ ಬಳಿಕ ಅದೇ ಜಾಗಕ್ಕೆ ಮತ್ತೊಮ್ಮೆ ರಾತ್ರಿ ಸಮಯದಲ್ಲಿ ಬಂದು ಕಾಫಿ ಕಣದ ಬಳಿ ಘೀಳಿಡುತಿತ್ತು ಎಂದು ಕಾರ್ಮಿಕರು ತಿಳಿಸಿದ್ದಾರೆ.
ಪರಿಹಾರಕ್ಕೆ ಒತ್ತಾಯ : ಕಳೆದ 2 ದಿನಗಳ ಹಿಂದೆ ಬಾಡಗ ಬಾಣಂಗಾಲ ಗ್ರಾಮದ ಫೇರ್‍ಲ್ಯಾಂಡ್ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯೋರ್ವಳ ಮೇಲೆ ಕಾಡಾನೆ ದಾಳಿ ನಡೆಸಲು ಮುಂದಾಗಿತ್ತು. ಈ ಸಂದರ್ಭ ಅದನ್ನು ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿದ್ದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರ ಗಾಯಗೊಂಡಿರುವ ಕಾರ್ಮಿಕನಿಗೆ ಅರಣ್ಯ ಇಲಾಖೆಯು ಕೂಡಲೇ ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡಬೇಕು ಹಾಗೂ ಬಾಡಗ ಬಾಣಂಗಾಲ ಮಾಲ್ದಾರೆ ವ್ಯಾಪ್ತಿಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಮಾಲ್ದಾರೆ ಗ್ರಾ.ಪಂ. ಸದಸ್ಯರುಗಳಾದ ಬಿ.ಡಿ. ಮುತ್ತಪ್ಪ ಪೂಜಾರಿ ಹಾಗೂ ಉಮೇಶ ಒತ್ತಾಯಿಸಿದ್ದಾರೆ.
ವರದಿ : ವಾಸು ಎ.ಎನ್