ವೀರಾಜಪೇಟೆ, ಮಾ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಎರಡು ಪದವಿಗಳಿಗೆ ಮೀಸಲಾತಿ ನಿಗದಿಪಡಿಸಿದ್ದು ಕಳೆದ 18 ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಎರಡು ಸ್ಥಾನಗಳಿಗೆ 30 ದಿನಗಳ ಅವಧಿಯೊಳಗೆ ಚುನಾವಣೆ ನಡೆಸುವಂತೆ ಸರಕಾರ ಜಿಲ್ಲಾಧಿಕಾರಿಗೆ ಆದೇಶಿಸಿದ್ದು ರಾಜ್ಯ ಸರಕಾರ ಮೀಸಲಾತಿಯನ್ನು ನಿನ್ನೆ ರಾಜ್ಯ ವಿಶೇಷ ಪತ್ರದಲ್ಲಿ ಪ್ರಕಟಿಸಿ ಆದೇಶ ಹೊರಡಿಸಿದೆ.ಕಳೆದ 2018ರ ಅಕ್ಟೋಬರ್ ತಿಂಗಳಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ ಐದು ವರ್ಷಗಳ ಅವಧಿಗೆ ಚುನಾವಣೆ ನಡೆದಿದ್ದು ರಾಜ್ಯ ಸರಕಾರದ ಮೀಸಲಾತಿಯ ಗೊಂದಲ ಉಚ್ಚ ನ್ಯಾಯಾಲಯದ ಮೆಟ್ಟೀಲೇರಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದರಿಂದ ಎರಡು ಸ್ಥಾನಗಳ ಚುನಾವಣೆ ವಿಳಂಬವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಗಳಾಗಿರುವ ಹದಿನೆಂಟು ಮಂದಿಗೂ (ಮೊದಲ ಪುಟದಿಂದ) ಈ ಚುನಾವಣೆಯ ನಂತರ ಐದು ವರ್ಷಗಳ ಅಧಿಕಾರದ ಅವಧಿ ಮುಂದುವರೆಯಲಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸದಸ್ಯರುಗಳಲ್ಲಿ ಒಂದು ಗುಂಪಿನಲ್ಲಿ ಕಾಂಗ್ರೆಸ್, ಜೆ,ಡಿ.ಎಸ್. ಪಕ್ಷೇತರರು ಸೇರಿದಂತೆ ಹತ್ತು ಮಂದಿ ಇದ್ದು ಈ ಪೈಕಿ ಸರಕಾರದ ಬಿ.ಸಿ.ಎ. ಮೀಸಲಾತಿಯ ಪ್ರಕಾರ ಎಸ್.ಎಚ್. ಮತೀನ್, ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ, ಫಸಹ ತಬ್ಸಂ, ಹಾಗೂ ಸಿ.ಕೆ. ಪೃಥ್ವಿನಾಥ್ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಪಡೆದಿದ್ದರೆ, ಬಿಜೆಪಿ.ಯ ಮತ್ತೊಂದು ಗುಂಪಿನಲ್ಲಿ ಎಂಟು ಮಂದಿ ಸದಸ್ಯರುಗಳಿದ್ದು ಈ ಪೈಕಿ ಕೆ.ಬಿ. ಹರ್ಷ, ಅನಿತಾ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದವರು ಮುಕ್ತವಾಗಿ ಸ್ಪರ್ಧಿಸಲು ಅವಕಾಶವಿರುವುದರಿಂದ ಈಗಿನ ಹದಿನೆಂಟು ಸದಸ್ಯರುಗಳು ಸ್ಪರ್ಧಿಸಲು ಅವಕಾಶವಿದೆ.

ಕಸರತ್ತು ಪ್ರಾರಂಭ: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ರಾಜ್ಯ ಸರಕಾರ ಮೀಸಲಾತಿಯನ್ನು ಗೊತ್ತುಪಡಿಸಿ ಅಧಿಕೃತ ಆದೇಶ ಹೊರಡಿಸುತ್ತಿದ್ದಂತೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸದಸ್ಯರುಗಳ ಎರಡು ಗುಂಪುಗಳ ನಡುವೆ ಆಯ್ಕೆಯ ಕಸರತ್ತು ಪ್ರಾರಂಭವಾಗಿದೆ. ಇನ್ನು ಎರಡು ಗುಂಪುಗಳ ಪಕ್ಷದ ವರಿಷ್ಠರುಗಳು ಮಧ್ಯ ಪ್ರವೇಶಿಸಿ ಪ್ರತಿ ಗುಂಪಿನಲ್ಲಿ ಎರಡು ಪದವಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ.ಚುನಾವಣೆಗೆ ಸ್ಪರ್ಧಿಸಲು ಒಂದು ಗುಂಪಿನಲ್ಲಿ ಹತ್ತು ಸದಸ್ಯರುಗಳು ಮತ್ತೊಂದು ಗುಂಪಿನಲ್ಲಿ ಎಂಟು ಸದಸ್ಯರಗಳಿರುವುದರಿಂದ ಚುನಾವಣೆಯ ಆಯ್ಕೆ ಸಮಸ್ಯೆಯಾಗಲಿದೆ. ಎಂಟು ಸದಸ್ಯರುಗಳಿರುವ ಗುಂಪು ಅದೇ ಪಕ್ಷದ ಶಾಸಕರು ಹಾಗೂ ಸಂಸತ್ ಸದಸ್ಯರುಗಳ ಬೆಂಬಲ ಪಡೆದರೂ ಎರಡು ಗುಂಪುಗಳ ನಡುವೆ ಸಮಬಲ ಬರಲಿದ್ದು ಇದು ಚುನಾವಣೆಗೆ ಸಮಸ್ಯೆಯಾಗಲಿದೆ. ಚುನಾವಣೆಗೆ ಎರಡು ಗುಂಪುಗಳ ನಡುವೆ ಸಮಬ¯ವಿರುವುದರಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಯಾವ ಗುಂಪಿಗೆ ಒಲಿಯುವುದೆಂದು ಕಾದು ನೋಡಬೇಕಾಗಿದೆ.

-ಡಿ.ಎಂ. ರಾಜ್‍ಕುಮಾರ್