ಸೋಮವಾರಪೇಟೆ, ಮಾ. 12: ತಾಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷಣೆಯ ಪ್ರವೇಶ ಶುಲ್ಕ ಎತ್ತಾವಳಿಯನ್ನು ಮರು ಹರಾಜು ಮಾಡಬೇಕೆಂದು ಆಗ್ರಹಿಸಿ ಕುಮಾರಳ್ಳಿ ಗ್ರಾಮದ ಎಚ್.ಬಿ. ಪೊನ್ನಪ್ಪ ಅವರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈಸರ್ಗಿಕದತ್ತವಾದ ಮಲ್ಲಳ್ಳಿ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಪ್ರವಾಸಿಗರ ದಂಡು ಬರುತ್ತಿದೆ. ಕಳೆದ ವರ್ಷ ಬೆಂಗಳೂರಿನ ವ್ಯಕ್ತಿಯೋರ್ವರು ಪ್ರವೇಶ ಶುಲ್ಕ ಎತ್ತಾವಳಿಯನ್ನು 8 ಲಕ್ಷ ರೂ.ಗಳಿಗೆ ಪಡೆದುಕೊಂಡಿದ್ದರು. ಆದರೆ ಈ ವರ್ಷ ಪಂಚಾಯಿತಿ ಟೆಂಡರ್ ಕರೆದಿದ್ದು, ಮೂವರು ಹರಾಜಿನಲ್ಲಿ ಭಾಗವಹಿಸುವ ಮೂಲಕ ಕೇವಲ 2.10ಲಕ್ಷ ರೂ.ಗಳಿಗೆ ಹರಾಜಾಗಿದೆ. ಇದರಿಂದ ಪಂಚಾಯಿತಿಗೆ ನಷ್ಟವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಹರಾಜನ್ನು ರದ್ದುಗೊಳಿಸಿ, ಬಹಿರಂಗ ಹರಾಜು ಮಾಡಬೇಕೆಂದು ಪೊನ್ನಪ್ಪ ಒತ್ತಾಯಿಸಿದ್ದಾರೆ.