ಮಡಿಕೇರಿ, ಮಾ. 12: 2021ರಲ್ಲಿ ನಡೆಯುವ ಜನಗಣತಿ ಪೂರ್ವ ಭಾವಿಯಾಗಿ ಮನೆಪಟ್ಟಿ, ಮನೆ ಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರರ್ ಪರಿಷ್ಕರಣೆ ಸಂಬಂಧ ತರಬೇತಿ ಕಾರ್ಯಾಗಾರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ವಿ.ಸ್ನೇಹ ಚಾಲನೆ ನೀಡಿದರು.

ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕ್ಷೇತ್ರ ತರಬೇತಿದಾರರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿ ಜನಗಣತಿ ರಾಷ್ಟ್ರೀಯ ಮಹತ್ವ ಪಡೆದ ಕಾರ್ಯಾವಾಗಿದ್ದು, ಇದರಲ್ಲಿ ನಿಯೋಜನೆಗೊಂಡ ಕ್ಷೇತ್ರ ತರಬೇತಿದಾರರು ತಮ್ಮ ಜವಾಬ್ದಾರಿಯನ್ನು ಅರಿತು ಸಮರ್ಪಕವಾಗಿ ಮನೆಪಟ್ಟಿ ಹಾಗೂ ಮನೆ ಗಣತಿ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ತರಬೇತಿದಾರರಾದ ಕೆ.ಜೆ. ದಿವಾಕರ ಮಾತನಾಡಿ, ಮನೆ ಮನೆಗೆ ಭೇಟಿ ನೀಡಿ ಮನೆ ಪಟ್ಟಿ ಹಾಗೂ ಮನೆ ಗಣತಿ ಮಾಡಬೇಕು. 2010ರಲ್ಲಿ ಸಿದ್ಧಪಡಿಸಿದ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‍ನ್ನು ಪರಿಷ್ಕರಣೆ ಮಾಡಲು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು. ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಶೇಖರ್ ಮನೆ ಪಟ್ಟಿ ಹಾಗೂ ಮನೆ ಗಣತಿ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.