*ಗೋಣಿಕೊಪ್ಪಲು, ಮಾ. 12: ಬಾಳೆಲೆ ವಿಜಯಲಕ್ಷ್ಮಿ ಪಿ.ಯು. ಕಾಲೇಜು ಹಾಗೂ ಕೊಡವ ಸಮಾಜದ ಆವರಣಕ್ಕೆ ಬಾಳೆಲೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಅವರ ಅನುದಾನದಲ್ಲಿ ಇಂಟರ್‍ಲಾಕ್ ಅಳವಡಿಕೆಗೆ ಭೂಮಿಪೂಜೆ ನೆರವೇರಿಸಲಾಯಿತು.

ವಿಜಯಲಕ್ಷ್ಮಿ ಪಿ.ಯು. ಕಾಲೇಜಿನ ಆವರಣದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಬಿ.ಎನ್. ಪ್ರಥ್ಯು ಬಾಳೆಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ಇಡೀ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಕ್ಷೇತ್ರವಾಗಿದೆ. 6 ಗ್ರಾಮ ಪಂಚಾಯಿತಿ ಇದರ ವ್ಯಾಪ್ತಿಗೆ ಒಳಪಡಲಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತಮಗೆ ರೂ. 21 ಲಕ್ಷ ಅನುದಾನ ದೊರೆತಿದೆ. ಜನತೆಯ ನಿರೀಕ್ಷೆ ದೊಡ್ಡದಿದ್ದು ಈ ಅನುದಾನದಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಧದಗುಡಿ ಕಾಲೊನಿಗೆ ರೂ. 5 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಒದಗಿಸಿಕೊಡಲಾಗಿದೆ. ದೇವನೂರು ಗ್ರಾಮದ ಬ್ಯಾಟರಾಯನಪುರ ಕೊಪ್ಪಲು ರಸ್ತೆ ಕಾಮಗಾರಿಗೆ ರೂ. 2 ಲಕ್ಷ ಅನುದಾನ ನೀಡಲಾಗಿದೆ. ಕೊಡವ ಸಮಾಜ ಆವರಣ ಮತ್ತು ವಿಜಯಲಕ್ಷ್ಮಿ ಪಿ.ಯು. ಕಾಲೇಜು ಆವರಣದ ಇಂಟರ್ ಲಾಕ್ ಅಳವಡಿಕೆಗೆ ತಲಾ ರೂ. 1 ಲಕ್ಷ ಅನುದಾನ ನೀಡಲಾಗಿದೆ. ಒಟ್ಟು ರೂ. 10 ಲಕ್ಷ ವೆಚ್ಚದಲ್ಲಿ ಉಳಿದ ಎಲ್ಲ ಕಾಮಗಾರಿಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ ಎಂದು ತಿಳಿಸಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಉಪಾಧ್ಯಕ್ಷರಾದ ಕಾಡ್ಯಮಾಡ ಉದಯ ಉತ್ತಪ್ಪ, ಕೆ.ಬಿ. ರಾಜ, ಸಹ ಕಾರ್ಯದರ್ಶಿ ಪೋಡಮಾಡ ಮೋಹನ್, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹ ಕೋಶಾಧಿಕಾರಿ ಆಲೆಮಾಡ ಕರುಂಬಯ್ಯ, ನಿರ್ದೇಶಕರಾದ ಅರುಣ, ಅಳಮೇಂಗಡ ಸುರೇಸ್ ಸುಬ್ಬಯ್ಯ, ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಚಿಟ್ಟಿಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಪೋಡಮಾಡ ಸುಕೇಶ್, ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಗುತ್ತಿಗೆದಾರರಾದ ಅಳಮೇಂಗಡ ಮೋಹನ್, ಹರೀಶ್ ಹಾಗೂ ಶಿಕ್ಷಕ ವೃಂದದವರಿದ್ದರು.