ಕೂಡಿಗೆ, ಮಾ. 12: ಮನುಷ್ಯನಿಗೆ ಆತ್ಮವಿಶ್ವಾಸ ಅಗತ್ಯ. ಅದು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ ಎಂದು ಕಾರ್ಪೊರೇಷನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕಿ ಪಿ.ವಿ. ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡಿಗೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಹೊಲಿಗೆ ತರಬೇತಿ ಕೇಂದ್ರದ ಆದಿವಾಸಿ ಪಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಸ್ವಉದ್ಯೋಗ ಪಡೆಯಲು ಸಂಸ್ಥೆಯಿಂದ ಎಲ್ಲಾ ತರಬೇತಿಯನ್ನು ನೀಡಲಾಗುತ್ತದೆ. ಬ್ಯಾಂಕ್ ಎಲ್ಲ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. ಅದನ್ನು ಬಳಸಿಕೊಂಡು ಉತ್ತಮ ಜೀವನವನ್ನು ಸಾಗಿಸಲು ಮುಂದಾಗಬೇಕು ಎಂದರು.

ಹೊಲಿಗೆ ತರಬೇತಿ ಪಡೆದ 25 ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿಭಾಗಿಯ ವ್ಯವಸ್ಥಾಪಕ ನಿರ್ದೇಶಕ ಸಿ.ವಿ. ಮಂಜುನಾಥ, ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಲಚಂದ್ರ, ಕೂಡಿಗೆ ತರಬೇತಿ ಕೇಂದ್ರದ ನಿರ್ದೇಶಕ ಜಿ.ಎಸ್. ಸುರೇಶ್ ಮತ್ತಿತರರು ಇದ್ದರು.