ಸೋಮವಾರಪೇಟೆ, ಮಾ. 12: ಮೊಗೇರ ಜನಾಂಗದವರ ಜಾತಿ ದೃಢೀಕರಣ ಪತ್ರದ ಸಮಸ್ಯೆಯನ್ನು ಬಗೆಹರಿಸುವಂತೆ ಮೊಗೇರ ಯುವ ವೇದಿಕೆಯ ಪದಾಧಿಕಾರಿಗಳು ತಹಶೀಲ್ದಾರ್ ಗೋವಿಂದರಾಜು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ವೇದಿಕೆಯ ಅಧ್ಯಕ್ಷ ಪಿ.ಬಿ. ಸುರೇಶ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಮಸ್ಯೆ ಬಗೆಹರಿಸು ವಂತೆ ಮನವಿ ಮಾಡಲಾದರೂ ಸಮಸ್ಯೆ ಹಾಗೇ ಉಳಿದಿದೆ. ಮೊಗೇರ ಜನಾಂಗದಲ್ಲಿ ಉಪಜಾತಿಗಳಿದ್ದು, ಎಲ್ಲರಿಗೂ ಒಂದೇ ಸರ್ಟಿಫಿಕೇಟ್ ನೀಡಬೇಕೆಂದು ಒತ್ತಾಯಿಸಿದರು.
ಇದೀಗ ಅಲಸಲು, ಪಾಲೆ, ಆದಿ ದ್ರಾವಿಡರು, ಆದಿಕರ್ನಾಟಕ ಎಂಬ ಹೆಸರಿನಲ್ಲಿ ದೃಢೀಕರಣ ನೀಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಮೊಗೇರ ಜನಾಂಗದ ಎಲ್ಲಾ ಉಪಜಾತಿಗಳಿಗೂ ಮೊಗೇರ ಪರಿಶಿಷ್ಟ ಜಾತಿ ಎಂದು ಸರ್ಟಿಫಿಕೇಟ್ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಪದಾಧಿಕಾರಿಗಳು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಎ.ಡಿ. ಅವರಿಗೆ ಅರ್ಜಿ ಸಲ್ಲಿಸಿದರೆ ಅಲ್ಲಿಂದ ನಮಗೆ ಮಾಹಿತಿ ಬರುತ್ತದೆ. ನಂತರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವದು ಎಂದು ತಹಶೀಲ್ದಾರ್ ಹೇಳಿದರು. ಈ ಸಂದರ್ಭ ವೇದಿಕೆಯ ಅಧ್ಯಕ್ಷ ಪಿ.ಬಿ. ಸುರೇಶ್, ಗೌರವಾಧ್ಯಕ್ಷ ಪಿ.ಕೆ. ಚಂದ್ರು, ಕ್ರೀಡಾ ಸಮಿತಿ ಅಧ್ಯಕ್ಷ ರಮೇಶ್, ಖಜಾಂಚಿ ಪಿ.ಬಿ. ದೇವರಾಜ್, ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.