ಮಡಿಕೇರಿ, ಮಾ. 12: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ವಾರ್ಷಿಕ ಮಹಾಸಭೆಯು ಬೆಂಗಳೂರಿನ ಕೊಡಗು ಗೌಡ ಸಮಾದ ಎರಡನೇ ಕಟ್ಟಡದಲ್ಲಿ ಯುವ ವೇದಿಕೆಯ ಅಧ್ಯಕ್ಷ ಕೊಂಬನ ಪ್ರವೀಣ್ ಅವರ ನೇತೃತ್ವದಲ್ಲಿ ನಡೆಯಿತು.
ಖಜಾಂಚಿ ಕುಂಟಕಾನ ದಿನೇಶ್ ಯುವ ವೇದಿಕೆಯ 2018-19ನೇ ಸಾಲಿನ ಲೆಕ್ಕ ಪತ್ರ ಮಂಡಿಸಿದರು. ಯುವ ವೇದಿಕೆಯ ಗೌರವ ಅಧ್ಯಕ್ಷರು ಹಾಗೂ ಕೊಡಗು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ ಮಾತನಾಡಿ, ಯುವ ವೇದಿಕೆಯು ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ. ಮುಂದೆಯು ಒಳ್ಳೆಯ ಕಾರ್ಯಕ್ರಮಗಳು ಮಾಡುವಂತೆ ಸಲಹೆ ನೀಡಿದರು.
ಅಧ್ಯಕ್ಷ ಕೊಂಬನ ಪ್ರವೀಣ್ ಮಾತನಾಡಿ, ಯುವ ವೇದಿಕೆಯ ಹಲವಾರು ಉತ್ತಮ ಕಾರ್ಯಕ್ರಮಗಳಿಗೆ ಸ್ಪಂದಿಸಿದ ಸಮಾಜದ ಬಾಂಧವರನ್ನು ನೆನಸಿದರು. ಮುಂದೆಯೂ ಗೌಡ ಸಂಸ್ಕøತಿಯನ್ನು ಪರಿಚಯಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸದಸ್ಯರಿಗೆ ಆಶ್ವಾಸನೆ ನೀಡಿದರು. ಸಭೆಯಲ್ಲಿ ಸದಸ್ಯರು ಹಲವಾರು ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ನಾಟೋಳನ ಸಾಹಿತ್ಯ, ಜಂಟಿ ಕಾರ್ಯದರ್ಶಿ ಕಡ್ಲೇರ ಮಿಥುನ್, ಸಹಕಾರ್ಯದರ್ಶಿ ಕೂಡಕಂಡಿ ತರುಣ್, ಗೌಡ ಸಮಾಜ ಪ್ರಧಾನ ಕಾರ್ಯದರ್ಶಿ ಕಾಳೆಯಂಡ ತೇಜಕುಮಾರ್, ಹಿರಿಯರಾದ ಅಮ್ಮವನ ವಾಸು, ಕುದುಪಜೆ ಮೋಹನ್, ಪೊನ್ನಚನ ನವೀನ್ ಪಾಲ್ಗೊಂಡಿದ್ದರು.
ದೇವಜನ ವೈಶಾಲಿ ಪ್ರಾರ್ಥಿಸಿದರೆ, ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೇನೇರ ದಿನೇಶ್ ಸ್ವಾಗತಿಸಿ, ವರದಿ ವಾಚಿಸಿದರು. ಕೂಡಕಂಡಿ ತರುಣ್ ವಂದಿಸಿದರು.