ಸಿದ್ದಾಪುರ, ಮಾ. 12: ಕಾಡಾನೆಗಳ ದಾಳಿಯಿಂದ ಪಾರಾಗಲು ಓಡಿದ ಕಾರ್ಮಿಕ ಮಹಿಳೆಯೋರ್ವರು ಕಾಲು ಜಾರಿ ಬಿದ್ದು ಗಾಯಗೊಂಡಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಬಿಬಿಟಿಸಿ ಕಂಪೆನಿಗೆ ಸೇರಿದ ಪ್ಯಾರ್ ಲ್ಯಾಂಡ್ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಮೇಘ ಎಂಬಾಕೆ ಕೆಲಸ ಮಾಡುತ್ತಿದ್ದ ಸಂದರ್ಭ ಕಾಫಿ ತೋಟದ ಮೇಲ್ಭಾಗದ ಬೆಟ್ಟದಿಂದ ಮರಿಯಾನೆಗಳು ಸೇರಿದಂತೆ 6 ಕಾಡಾನೆಗಳು ಏಕಾಏಕಿ ಓಡಿ ಬಂದವು ಎನ್ನಲಾಗಿದೆ.
ಈ ಸಂದರ್ಭ ಅವುಗಳಿಂದ ತಪ್ಪಿಸಿಕೊಳ್ಳಲು ಮೇಘಾಳ ಓಡುವ ಸಂದರ್ಭ ಕಾಲು ಎಡವಿ ಚರಂಡಿಗೆ ಬಿದ್ದ ಪರಿಣಾಮ ಎಡಗಾಲಿನ ಮೂಳೆ ಮುರಿದಿದೆ. ಈ ಸಂದರ್ಭ ಕಿರುಚಿಕೊಂಡಾಗ ಸಮೀಪದಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು ಕೂಡ ದಿಕ್ಕಾಪಾಲಾಗಿ ಓಡಿದ್ದು, ನಂತರ ಸಮೀಪದಲ್ಲಿದ್ದ ಗಾಯಾಳುವಿನ ಪತಿ ಮಂಜು ಎಂಬವರು ಆಕೆಯನ್ನು ಎತ್ತಿಕೊಂಡು ಬಂದು ಆ್ಯಂಬ್ಯುಲೆನ್ಸ್ ಮೂಲಕ ವೀರಾಜಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸಿದ್ದಾಪುರದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಡಿ. ಮುತ್ತಪ್ಪ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.