ವೀರಾಜಪೇಟೆ, ಮಾ. 11: ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತರಾಗದೆ ಸರಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಪ್ರತಿಯೊಂದು ವಿದ್ಯಾರ್ಥಿಯು ಪಡೆದುಕೊಂಡು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುವಂತಾಗಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಬೋಪಯ್ಯ ಆದಾಯದಲ್ಲಿ ಮಿತಿ ಇರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದರು. ನಂತರ ಮಾತನಾಡಿದ ಅವರು ಸರಕಾರಿ ಶಾಲಾ ಕಾಲೇಜುಗಳು ಖಾಸಗಿ ಕಾಲೇಜುಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ವಿದ್ಯಾರ್ಥಿಗಳು ಕಾಲೇಜು ಸಮಯದಲ್ಲಿ ದಿನನಿತ್ಯ ಕಾಲೇಜಿಗೆ ಹಾಜರಾಗಿ ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಗಳಾಗಬೇಕು. ಮುಂದಿನ ವರ್ಷ ಈ ಕಾಲೇಜಿಗೆ ರೂ. 1.5 ಕೋಟಿ ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳುಳ್ಳ ಉತ್ತಮವಾದ ಕಟ್ಟಡ ಸ್ಥಾಪನೆಯಾಗಲಿದೆ. ಇದರ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೇ ಸಲ್ಲಿಸಲಾಗಿದೆ ಎಂದು ಹೇಳಿದರು.

ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ.ಜೀವನ್, ಕಾಲೇಜಿನ ಪ್ರಾಧ್ಯಾಪಕ ಹೆಚ್.ಎಸ್. ವೇಣುಗೋಪಾಲ್, ಪ್ರೊ. ಎಂ.ಎಂ. ಸುನಿತ, ಎಂ.ರಾಖಿ ಪೂವಣ್ಣ, ವಿ.ಎನ್. ಉತ್ತಪ್ಪ ಉಪಸ್ಥಿತರಿದ್ದರು.