ತಾ. 8 ಭಾನುವಾರದಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಇವರು ಮಂಗಳೂರಿನಲ್ಲಿ ಏರ್ಪಡಿಸಿದ್ದ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ ದಲ್ಲಿ ‘ಇಂದಿನ ಭಾರತೀಯ ಪತ್ರಿಕೋದ್ಯಮ’ ಕುರಿತ ಪ್ರಾಸ್ತಾವಿಕ ವಿಷಯವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಎ. ಪೊನ್ನಪ್ಪ ಮಂಡಿಸಿದರು. ಅದರ ಪ್ರಮುಖಾಂಶ ಈ ಕೆಳಗಿನಂತಿದೆ.

ಹಲವು ಸವಾಲುಗಳ ನಡುವೆ ನಿಂತಿರುವ “ಭಾರತೀಯ ಪತ್ರಿಕೋದ್ಯಮ” ಕುರಿತಾದ ಚರ್ಚೆ ಈ ಕಾಲದ ತುರ್ತು ಎಂದೇ ನಾವು ಭಾವಿಸಿದ್ದೇನೆ. 1947ರ ನಂತರ ಅಂದರೆ ಭಾರತಕ್ಕೆ ಸ್ವತಂತ್ರ ಲಭಿಸಿದ ನಂತರದ ಪತ್ರಿಕೋದ್ಯಮಕ್ಕೂ ಈ ಕಾಲಮಾನದ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಕಾಲಕಾಲಕ್ಕೆ ಪತ್ರಿಕೋದ್ಯಮ ತನ್ನ ಧ್ಯೇಯ, ಧೋರಣೆಗಳನ್ನು ಬದಲಿಸಿಕೊಳ್ಳುತ್ತಲೇ ಬಂದಿರುವುದನ್ನು ನಾವೆಲ್ಲಾ ಕಾಣುತ್ತಾ ಬಂದಿದ್ದೇವೆ. 1985 ರ ನಂತರ ಇಡೀ ದೇಶ ವ್ಯಾಪಿಸಿದ ವಿದ್ಯುನ್ಮಾನ ಮಾಧ್ಯಮ ಮುದ್ರಣ ಮಾಧ್ಯಮವನ್ನು ಪಲ್ಲಟಗೊಳಿಸಿದ್ದು ಸುಳ್ಳಲ್ಲ ; ಬೆಳೆಯುತ್ತಾ ಸಾಗಿದಂತೆ ಅದೀಗ ಕೇವಲ ವಹಿವಾಟಿನ ಕೇಂದ್ರವಾಗಿದೆ. ಆ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ ಎಂದೇ ಭಾವಿಸಿದ್ದೇನೆ. ಪ್ರಸ್ತುತ ಮಾಧ್ಯಮ ಕ್ಷೇತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು ಸರಿಯಾದ ಕ್ರಮ ಎನಿಸುತ್ತಿದೆ. ಇದರಲ್ಲಿ ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಎಂದು ಪ್ರತ್ಯೇಕಿಸಿಯೇ ವಿಷಯವನ್ನು ಚರ್ಚೆಗೆ ಒಡ್ಡಿಕೊಳ್ಳಬೇಕು. ಉಜ್ವಲ ಇತಿಹಾಸ ಇರುವ ಮುದ್ರಣ ಮಾಧ್ಯಮ ಹಿಂದಿನ ತನ್ನ ಶಕ್ತಿ, ಪ್ರಭಾವ ಕಳೆದುಕೊಂಡು ಕೇವಲ ಅದು ಒಬ್ಬ ಮಾಲೀಕರ ಮನೋಸ್ಥಿತಿಯ ಮೇಲೆ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಯಾಕೆ ಹೀಗಾಯಿತು ಎಂಬ ಪ್ರಶ್ನೆ ನಮಗೆ ಬರಲೇಬೇಕು? ಮತ್ತು ನಾವೆಲ್ಲಾ ಚಿಂತನೆ ನಡೆಸಬೇಕು.

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಅನಂತರ ಕೂಡಾ ಮುದ್ರಣ ಮಾಧ್ಯಮದಲ್ಲಿ ಆದರ್ಶವಿತ್ತು. ಗೊತ್ತು-ಗುರಿ ಇತ್ತು. ಹೀಗಾಗಿ ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದವು. ಆಗಲೂ ಬಹುತೇಕ ಮಾಧ್ಯಮಗಳಿಗೆ ಪತ್ರಿಕಾ ಮಾಲೀಕರಿದ್ದರೂ ಅವರು ಸಂಪಾದಕೀಯ/ಎಡಿಟೋರಿಯಲ್ ವಿಷಯಗಳಿಗೆ ತಲೆಹಾಕುತ್ತಿರಲಿಲ್ಲ. ಪತ್ರಕರ್ತರಿಗೆ ಸ್ವಾತಂತ್ರ್ಯವಿತ್ತು.

ಈಗಿನ ಮಾಧ್ಯಮಗಳಿಗೆ ಅಂಥ ಯಾವ ಜವಾಬ್ದಾರಿ ಇರುವಂತೆ ಕಂಡುಬರುತ್ತಿಲ್ಲ. ಮಾಲೀಕನ ಲಹರಿಯ ಮೇಲೆ ಪತ್ರಿಕೆಗಳು ನಡೆಯತೊಡಗಿವೆ. ಇಂತಹ ಪತ್ರಿಕೆಗಳು ಒಂದು ರಾಜಕೀಯ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದು ದುರಂತವಲ್ಲದೆ ಬೇರೇನು ? ಇಂಥ ಬೆಳವಣಿಗೆ ಜನರಿಗೂ ಅರ್ಥವಾಗಿದೆ. ಈಗ ಇಂಥ ಕಡೆ ಕೆಲಸ ಮಾಡುವ ಪತ್ರಕರ್ತರಲ್ಲಿ ನೈತಿಕ ಹೊಣೆಗಾರಿಕೆಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ ? ಮಾಲೀಕ ಹೇಳಿದಂತೆ ಅವನು ಕೆಲಸ ಮಾಡಬೇಕಾದ ಸನ್ನಿವೇಶ ನಿರ್ಮಾಣಗೊಂಡಿದೆ. ಹೀಗಾಗಿ ನಾವೀಗ ಒಂದು ಗಂಭೀರ ತಿರುವಿಗೆ ಬಂದು ನಿಂತಿದ್ದೇವೆ. ಮುದ್ರಣ ಮಾಧ್ಯಮದ್ದು ಒಂದು ಬಗೆಯಾದರೆ; ವಿದ್ಯುನ್ಮಾನ ಮಾಧ್ಯಮದ್ದು ಬೇರೆಯದೇ ರೀತಿಯ ಕಥನ. 90ರ ದಶಕದಿಂದೀಚೆಗೆ ವಿದ್ಯುನ್ಮಾನ ಮಾಧ್ಯಮಕ್ಕೆ ಹಣ ಹೂಡುವವರ ಸಂಖ್ಯೆ ಹೆಚ್ಚಾಗಿ ಇಡೀ ದೇಶದಾದ್ಯಂತ ವ್ಯಾಪಿಸಿಕೊಂಡವು. ಅದು ಅವರ ವ್ಯಾಪಾರ ಧರ್ಮ ಬಿಡಿ. ಸೊರಗುವುದು ಮಾತ್ರ ಮಾಧ್ಯಮದ ನೈಜ ಕಾಯಕ, ಒಲವು ಮತ್ತು ನಿಲುವುಗಳಷ್ಟೇ. ಇಂಥ ಕಾಲಘಟ್ಟದಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶಿಸಿದ ಕೆಲವರಿಗೆ ಅದರ ಪ್ರಾಥಮಿಕ ಜ್ಞಾನವೂ ಇರಲಿಲ್ಲ. ಕೈಯಲ್ಲಿ ಇದ್ದದ್ದು ಪದವಿ ಇಲ್ಲವೇ ಪತ್ರಿಕೋದ್ಯಮ ಪದವಿಪತ್ರ ಮಾತ್ರ. ಈ ಪರಿಸ್ಥಿತಿ ಈಗಲೂ ಬದಲುಗೊಂಡಿಲ್ಲ ಎನ್ನುವುದೇ ಚಕಿತಗೊಳಿಸುವ ಸಂಗತಿ.

ಇದರ ಕಾರ್ಯವೈಖರಿಯನ್ನೇನು ನಾನು ನಿಮಗೆ ವಿವರಿಸಿ ಹೇಳಬೇಕಿಲ್ಲ. ಕೆಲವೊಮ್ಮೆ ಆ ಕೆಲವು ವಾಹಿನಿಗಳ ಬಾಲಿಶತನದ ವರದಿಗಳನ್ನು ನಾವು ನೋಡುತ್ತಲೇ ಬರುತ್ತಿದ್ದೇವೆ. ಇವರಿಂದಾಗಿ ಅನೇಕ ಸಾರಿ ಜನರು ದಾರಿ ತಪ್ಪುತ್ತಾರೆ. ಇದು ಇಡೀ ದೇಶದ ಜನರ ಯೋಚನಾ ಲಹರಿಯನ್ನೇ ಬದಲಿಸುವ ಪ್ರಕ್ರಿಯೆಯಾಗಿ ಬೆಳೆದಿದೆ ಎಂಬ ಸಂಗತಿಯನ್ನು ನಾನಿಲ್ಲಿ ಗಮನಕ್ಕೆ ತರಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿನ ಪತ್ರಿಕೆಗಳದ್ದು ಇನ್ನೊಂದು ಸಮಸ್ಯೆ. ಜಾಗತಿಕ ಮಟ್ಟದ ಸವಾಲುಗಳನ್ನು ಎರುರಿಸಲಾಗದೆ ಎಷ್ಟೋ ಸಣ್ಣ ಪತ್ರಿಕೆಗಳ ಪ್ರಕಟಣೆ ಸ್ಥಗಿತಗೊಂಡಿದೆ. ಅಲ್ಲಿನ ಪತ್ರಕರ್ತರು ಬದುಕಿಗಾಗಿ ಇನ್ನಾವುದೋ ಕೆಲಸ ಹಿಡಿಯುವ ಸ್ಥಿತಿಗೂ ತಲುಪಿರುವುದು ನೋವಿನ ಸಂಗತಿ. ಇಂಥ ಸ್ಥಿತಿಯಲ್ಲಿಯೂ ಕೆಲವು ಮಾಧ್ಯಮ ಸಂಸ್ಥೆಗಳು ಗಟ್ಟಿಯಾಗಿ ಬೇರೂರಿ ಭರವಸೆಯ ಸಂಕೇತಗಳಂತಿವೆ. ನನ್ನ ಮಾತೃ ಭೂಮಿಯದ್ದೇ ಉದಾಹರಣೆ ಹೇಳುವುದಾದರೆ ಕೊಡಗಿನ ‘ಶಕ್ತಿ’ ಪತ್ರಿಕೆ ಭದ್ರವಾಗಿ ನೆಲೆಯೂರಿದೆ. ಎಷ್ಟೋ ಬಾರಿ ದೊಡ್ಡ ಪತ್ರಿಕೆಗಳು-ಮಾಧ್ಯಮ ಸಂಸ್ಥೆಗಳು ಮಾಡದ ಕೆಲಸವನ್ನು ಸಣ್ಣ ಪತ್ರಿಕೆಗಳು ಮಾಡಿರುವ ಉದಾಹರಣೆಗಳಿವೆ. ಒಳ್ಳೆಯ ಪತ್ರಕರ್ತರನ್ನು ರೂಪಿಸುವಲ್ಲಿಯೂ ಸಣ್ಣ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಹಾಗಾಗಿ ಸಣ್ಣ ಪತ್ರಿಕೆಗಳು ಉಳಿಯಬೇಕು ಮತ್ತು ಬೆಳೆಯಬೇಕು. ಇವುಗಳನ್ನು ಕಟ್ಟುವ ಕೆಲಸ ನಾವೆಲ್ಲರೂ ಕೂಡಿ ಮಾಡಬೇಕಿದೆ. ಮಂಗಳೂರು-ಗೋಣಿಕೊಪ್ಪಲು. ಮಾ. 9: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ರಾಜ್ಯ ಪ್ರಶಸ್ತಿಯನ್ನು ಕೊಡಗಿನ ಚೆಟ್ಟಳ್ಳಿಯ ಕನ್ನಡ ಪ್ರಭ ವರದಿಗಾರ ಪುತ್ತರಿರ ಕರುಣ್ ಕಾಳಯ್ಯ ಸ್ವೀಕರಿಸಿದರು.ಕೊಡವ ದಿರಿಸುವಿನಲ್ಲಿ ಪ್ರಶಸ್ತಿ ಸ್ವೀಕರಿಸಿ ವಿಶೇಷ ಗಮನ ಸೆಳೆದರು. ಮಂಗಳೂರಿನ ಪುರ ಭವನದಲ್ಲಿ ಆಯೋಜಿಸಿದ 35 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಉಪ ಮುಖ್ಯಮಂತಿ ಗೋವಿಂದ ಕಾರಜೋಳ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭ ಸಂಸದ ನಳೀನ್ ಕುಮಾರ್ ಕಟೀಲ್, ಎಂ.ಎಲ್.ಸಿ. ಐವಾನ್ ಡಿಸೋಜ, ಮಾಜಿ ಸಚಿವ ರಮಾನಾಥ್ ರೈ,ರಾಜ್ಯ ಸಮಿತಿಯ ಅಧ್ಯಕ್ಷ ಶಿವಾನಂದ ತಗಡೂರು, ಹಾಗೂ ಸಮಿತಿಯ ಪದಾಧಿಕಾರಿಗಳು, ಇನ್ನಿತರು ಉಪಸ್ಥಿತರಿದ್ದರು.