ವೀರಾಜಪೇಟೆ, ಮಾ. 9: ಜೀವನದಲ್ಲಿ ಜಿಗುಪ್ಸೆಗೊಂಡು ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ಬಿಳುಗುಂದ ಗ್ರಾಮದ ನಿವಾಸಿ ಹೆಚ್ ಸುಮಂತ್ (32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಿಳುಗುಂದ ಗ್ರಾಮದ ನಿವಾಸಿ ಕೋಪುಡ ದೇವಯ್ಯ ಅವರ ಲೈನ್ ಮನೆಯಲ್ಲಿ ಸುಮಂತ್ ಮತ್ತು ಪತ್ನಿ ಹೆಚ್.ಎಸ್ ರಸಿಕ ಹಾಗೂ ಮೂವರು ಮಕ್ಕಳೊಂದಿಗೆ ಕಳೆದ ಐದು ವರ್ಷಗಳಿಂದ ವಾಸವಿದ್ದು; ತೋಟದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಮೂರ್ನಾಡಿನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಣೆಗೆಂದು ಪತ್ನಿ, ಮಕ್ಕಳೊಂದಿಗೆ ತೆರಳಿ ಬಳಿಕ ಪತ್ನಿ ಮತ್ತು ಮಕ್ಕಳಿಗೆ ನೀವುಗಳು ಸ್ನೇಹಿತರೊಂದಿಗೆ ಮನೆಗೆ ಬನ್ನಿ ಎಂದು ಹೇಳಿ ಬಿಳುಗುಂದ ಮನೆಗೆ ಬಂದ ಸುಮಂತ್ ನೇಣಿಗೆ ಶರಣಾಗಿದ್ದು; ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.