ಮಡಿಕೇರಿ, ಮಾ. 10: ತಿರಿಬೊಳ್‍ಚ ಕೊಡವ ಸಂಘದ ಆಶ್ರಯದಲ್ಲಿ ತಾ. 17 ರಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಹಯೋಗದಲ್ಲಿ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ‘ಕೊಡವ ಮಂಗಲತ್ ನೀರ್ ಎಡ್‍ಪಲ್ಲಿ ಮೂಡಿನ ತಡ್‍ತಿತ್ ಆಡುವೊ’ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ ಅವರ ಮುಂದಾಳತ್ವದಲ್ಲಿ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕೊಡವ ಮದುವೆಯ ಗಂಗಾಪೂಜೆಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಕೆಲವಾರು ಸಮಸ್ಯೆಗಳ ಬಗ್ಗೆ ಚರ್ಚಾಗೋಷ್ಠಿಯು ಇದಾಗಿದ್ದು, ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹಾಗೂ ಕೊಡವರು ಹೆಚ್ಚಾಗಿ ನೆಲೆಸಿರುವ ಮೈಸೂರು, ಬೆಂಗಳೂರು ನಗರಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ ಬಳಿಕ ಒಮ್ಮತದ ನಿರ್ಧಾರಕ್ಕೆ ಬರಲು ಸಹಕಾರಿಯಾಗುವಂತೆ ಜನಜಾಗೃತಿ ಮೂಡಿಸಲಾಗುವುದು.

ಆಸಕ್ತ ಕೊಡವ ಬಾಂಧವರು ಈ ಮುಕ್ತ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಸಂಘದ ಸಹ ಕಾರ್ಯದರ್ಶಿ ಬೊಟ್ಟೋಳಂಡ ನಿವ್ಯ ದೇವಯ್ಯ ತಿಳಿಸಿದ್ದಾರೆ.