ಮಡಿಕೇರಿ, ಮಾ. 9: ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಕಡೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆ ತಾ. 7 ರಂದು ರಾತ್ರಿ 10 ಗಂಟೆ ಸಮಯದಲ್ಲಿ ಕೂತಿ ಗ್ರಾಮದ ಕಡೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಲಾರಿಯನ್ನು (ಕೆಎ 12 ಬಿ 3497) ಪತ್ತೆ ಹಚ್ಚಿ ಲಾರಿಯಲ್ಲಿ ಮರಳು ಸಾಗಿಸುತ್ತಿದ್ದ ಸಿ.ಟಿ. ದರ್ಶನ್ ಮತ್ತು ಕೆ.ಎಸ್. ಪ್ರೀತಮ್ ಎಂಬವರನ್ನು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ. ಸಿ.ಟಿ. ದರ್ಶನ್ ಮತ್ತು ಕೆ.ಎಸ್. ಪ್ರೀತಮ್ ಅವರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಡಿಸಿಐಬಿಯ ಪ್ರಭಾರ ಇನ್ಸ್‍ಪೆಕ್ಟರ್ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಯವರಾದ ಕೆ.ವೈ. ಹಮೀದ್, ಕೆ.ಎಸ್. ಅನಿಲ್‍ಕುಮಾರ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್ ಹಾಗೂ ಚಾಲಕ ಕೆ.ಎಸ್. ಶಶಿಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.