ಮಡಿಕೇರಿ, ಮಾ. 10: ‘ಶಕ್ತಿ’ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ ಈ ಬಾರಿಯ ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿ ದ್ದಾರೆ. ಶಕ್ತಿಯಲ್ಲಿ ಪ್ರಕಟವಾದ ‘ಫೀಲ್ಡ್ ಮಾರ್ಷಲ್ ಜನ್ಮ ದಿನಾಚರಣೆ ಸರಕಾರದ ಮೌನ ವರದಿ’ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯ ದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2019ನೇ ಸಾಲಿನಲ್ಲಿ ಪ್ರಕಟವಾದ ಅತ್ಯುತ್ತಮ ಪರಿಣಾಮಕಾರಿ ವರದಿಗೆ ಕೆ.ಬಿ. ಮಹಾಂತೇಶ್ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಫಲಕದೊಂದಿಗೆ 5 ಸಾವಿರ ರೂಪಾಯಿ ನಗದು ನೀಡಿ, ಗೌರವಿಸಲಾಗುತ್ತದೆ. ಮಾರ್ಚ್ 29 ರಂದು ಹಂಚಿಕಾಡಿನಲ್ಲಿರುವ (ಅಮ್ಮತ್ತಿ ಹೊಸೂರು) ಕೂರ್ಗ್ ಕ್ಲಿಫ್ಸ್ ರೆಸಾರ್ಟ್‍ನಲ್ಲಿ ಆಯೋಜಿಸಲಾಗಿರುವ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಅಂದು ರಾತ್ರಿ 7 ಗಂಟೆಗೆ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಪ್ರೆಸ್‍ಕ್ಲಬ್ ಡೇ ಕಾರ್ಯಕ್ರಮವನ್ನು ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಪಾಲ್ಗೊಳ್ಳಲಿದ್ದಾರೆ. ಕ್ಲಬ್ ಸದಸ್ಯರಿಗೆ ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಹಾಗೂ ಪ್ರಶಸ್ತಿಗೆ ಭಾಜನರಾಗಿರುವ ಕ್ಲಬ್ ಸದಸ್ಯರನ್ನು ಸನ್ಮಾನಿಸಲಾಗುತ್ತದೆ. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಆಶ್ರಯ ನೀಡಿದ ವಿ.ವಿ. ಅರುಣ್ ಕೂರ್ಗ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿಗೆ ಭಾಜನರಾದ ಎಚ್.ಆರ್. ಹರೀಶ್‍ಕುಮಾರ್, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರುಗಳು ಸನ್ಮಾನಿತರಾಗಲಿದ್ದಾರೆ.