ಮಡಿಕೇರಿ, ಮಾ. 9: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ಮೇರೆಗೆ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಶೀಘ್ರ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು; ಈ ಹಿಂದೆ ನಿಗದಿಯಾಗಿದ್ದ ಪರೀಕ್ಷಾ ದಿನಾಂಕ ಬದಲಾಗಿದೆ.
ಇಂದು ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರೊಂದಿಗೆ ವೀಡಿಯೋ ಸಂವಾದ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪರೀಕ್ಷಾ ದಿನಾಂಕವನ್ನು ಬದಲಾಯಿಸಿ ಆದೇಶ ಹೊರಡಿಸಿದ್ದಾರೆ. ಅದರನ್ವಯ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಾ. 11 ರಿಂದ (ನಾಳೆಯಿಂದ) ತಾ. 16ರವರೆಗೆ ಹಾಗೂ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತಾ. 16 ರಿಂದ ತಾ. 23ರವರೆಗೆ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗಳು ಮುಗಿದ ಮರು ದಿನದಿಂದಲೇ ವಾರ್ಷಿಕ ರಜೆ ನೀಡಬೇಕು. ಹತ್ತನೇ ತರಗತಿ ಹಾಗೂ 7ನೇ ತರಗತಿ ಪರೀಕ್ಷೆಗಳನ್ನು ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯಂತೆ ನಡೆಸಬೇಕು ಎಂದು ಸೂಚನೆ ನೀಡಿರುವದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ ‘ಶಕ್ತಿ’ಗೆ ಖಚಿತಪಡಿಸಿದ್ದಾರೆ.