ಕುಶಾಲನಗರ, ಮಾ. 7: ಕುಶಾಲನಗರದ ಕಾವೇರಿ ಯುವಕ ಸಂಘದ ಆಶ್ರಯದಲ್ಲಿ ಏಪ್ರಿಲ್ 10 ರಿಂದ ನಾಲ್ಕು ದಿನಗಳ ಕಾಲ ಕಾವೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅನೀಶ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ 10ನೇ ವಾರ್ಷಿಕೋತ್ಸವ ಅಂಗವಾಗಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು 1 ಲಕ್ಷ ರೂ.ಗಳನ್ನು ಪ್ರಥಮ ಬಹುಮಾನವಾಗಿ ನೀಡಲಾಗುವುದು. ರೂ. 60 ಸಾವಿರ ದ್ವಿತೀಯ, ರೂ. 50 ಸಾವಿರ ತೃತೀಯ ಹಾಗೂ ನಾಲ್ಕನೇ ಬಹುಮಾನವಾಗಿ ರೂ. 30 ಸಾವಿರ ನಗದು ನೀಡಲಾಗುವುದು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಸರಕಾರಿ, ಅರೆ ಸರಕಾರಿ ಇಲಾಖೆಗಳ ನೌಕರರಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಹಾಗೂ ಸರಕಾರಿ ನೌಕರರ ತಂಡಗಳು ಪ್ರತ್ಯೇಕ ಪೂಲ್‍ಗಳಲ್ಲಿ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಆಟಗಾರರನ್ನು ಬಿಡ್ಡಿಂಗ್ ಮೂಲಕ ಫ್ರಾಂಚೈಸಿಗಳು ಆಯ್ಕೆ ಮಾಡಬೇಕಾಗಿದ್ದು ಸರಕಾರಿ ನೌಕರರಿಗೆ ಯಾವುದೇ ಬಿಡ್ಡಿಂಗ್ ಇರುವುದಿಲ್ಲ ಎಂದು ಅವರು ತಿಳಿಸಿದರು.

ಸಂಘದ ಸಹಕಾರ್ಯದರ್ಶಿ ಸುಬ್ರಮಣಿ ಮಾತನಾಡಿ, ಸರಕಾರಿ ನೌಕರರ ತಂಡಗಳು ಸಾರ್ವಜನಿಕರ ತಂಡಗಳೊಂದಿಗೆ ಮುಖಾಮುಖಿ ಪಂದ್ಯಾಟ ಇರುವುದಿಲ್ಲ. ಪ್ರತ್ಯೇಕ ಪೂಲ್‍ಗಳಲ್ಲಿ ಜಯಗಳಿಸಿ ಅಂತಿಮ ಸುತ್ತಿನ ಪಂದ್ಯಾಟಗಳಲ್ಲಿ ಮಾತ್ರ ಮುಖಾಮುಖಿಯಾಗುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 7899147627, 9620535204, ಸಂಪರ್ಕಿಸಲು ಅವರು ಕೋರಿದ್ದಾರೆ.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್. ಪ್ರದೀಪ್, ಸದಸ್ಯರಾದ ಪಿ.ಬಿ. ಪವನ್, ದಯಾನಂದ್ ಇದ್ದರು.