ಹೆಬ್ಬಾಲೆ, ಮಾ. 7: ಸಮೀಪದ ಶಿರಂಗಾಲ ಗ್ರಾಮದಲ್ಲಿ ಕಾವೇರಿ ನದಿ ದಂಡೆಯ ಮೇಲೆ ನೆಲೆ ನಿಂತಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ತಾ. 9 ರಂದು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ಗ್ರಾಮದ ಕಾವೇರಿ ನದಿಯ ದಂಡೆಯಲ್ಲಿರುವ ಈ ದೇವಸ್ಥಾನವು 9ನೇ ಶತಮಾನದಲ್ಲಿ ಚೋಳರ ರಾಜ, ರಾಜ ಒಂದನೇ ರಾಜ ಚೋಳನ ಅವಧಿಯಲ್ಲಿ ನಿರ್ಮಿತವಾದ ದೇವಾಲಯ. ಈಶ್ವರ, ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ಇರುವಂತಹ ಏಕಶಿಲಾ ಮೂರ್ತಿ ಹಾಗೂ ಈಶ್ವರ ಲಿಂಗ ಜೊತೆಗೆ ನಂದಿ, ಈ ಎಲ್ಲ ವಿಗ್ರಹಗಳು ಒಂದೇ ನೇರದಲ್ಲಿರುವ ದಕ್ಷಿಣ ಭಾರತದ ಏಕೈಕ ದೇವಾಲಯ ಇದಾಗಿದೆ. ಉತ್ತರ ಭಾರತದಲ್ಲಿ ಗಂಗಾ ನದಿ ತೀರದಲ್ಲಿ, ದಕ್ಷಿಣ ಭಾರತದಲ್ಲಿ ಕಾವೇರಿ ತೀರದಲ್ಲಿ ಉಮಾಮಹೇಶ್ವರ ದೇವಾಲಯ ನಿರ್ಮಾಣಗೊಂಡಿರುವುದು ವಿಶೇಷವಾಗಿದೆ. ಅಲ್ಲದೆ ಪ್ರತಿ ಶಿವರಾತ್ರಿಯಂದು ವಿಶೇಷ ಪೂಜಾ ಕಾರ್ಯ ನಡೆಯುವುದರೊಂದಿಗೆ ಆ ದಿನದಂದು ಸೂರ್ಯೋದಯದ ಸೂರ್ಯನ ಕಿರಣಗಳು ನೇರವಾಗಿ ಉಮಾಮಹೇಶ್ವರ ದೇವಸ್ಥಾನದ ವಿಗ್ರಹದ ಮೇಲೆ ಬೀಳುತ್ತವೆ. ಇದು ಈ ದೇವಾಲಯದ ವೈಶಿಷ್ಟ್ಯವಾಗಿದೆ.

ಕಳೆದ ಮೂರುನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮತ್ತು ಕರ್ನಾಟಕ ಸರ್ಕಾರ ಪ್ರಾಚ್ಯವಸ್ತು ಇಲಾಖೆ ಹಾಗೂ ಗ್ರಾಮದ ದೇವತಾ ಸಮಿತಿಯ ಆರ್ಥಿಕ ನೆರವಿನಿಂದ ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ಉಮಾಮಹೇಶ್ವರ ದೇವಸ್ಥಾನವನ್ನು ನವೀಕರಣಗೊಳಿಸಲಾಗಿದೆ.

ಶ್ರೀ ಮಂಟಿಗಮ್ಮ ಹಾಗೂ ಉಮಾಮಹೇಶ್ವರ ದೇವತಾ ಸಮಿತಿ ವತಿಯಿಂದ ತಾ. 9 ರಿಂದ 13 ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಮವಾರ ಬೆಳಿಗ್ಗೆ ಉಮಾಮಹೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಇರುತ್ತದೆ. ಕಲಾವಿದ ರವಿ ತಂಡದವರ ವೀರಗಾಸೆ ಕುಣಿತ ಮತ್ತು ಮಂಗಳವಾದ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಡಿಕೇರಿ ಇವರ ಪ್ರಯೋಜಕತ್ವದಲ್ಲಿ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನದೊಂದಿಗೆ ಮಧ್ಯಾಹ್ನ 12 ಕ್ಕೆ ವಿವಿಧ ಪುಷ್ಪಾ ಹಾಗೂ ಬಾವುಟಗಳಿಂದ ಅಲಂಕೃತ ರಥಕ್ಕೆ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಉಮಾಮಹೇಶ್ವರ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಮಾ.

ತಾ. 10 ರಂದು ಉಮಾಮಹೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಇರುತ್ತದೆ. ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಸೇರುವ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಹಬ್ಬಕ್ಕೆ ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿ ಗ್ರಾಮದ ಜನತೆ, ಶಿರಂಗಾಲ, ತೊರೆನೂರು, ಮಣಜೂರು, ಕಾಳಡನಕೊಪ್ಪಲು, ಹೆಬ್ಬಾಲೆ, ನಲ್ಲೂರು, ಅಳುವಾರ, ಸಿದ್ಧಲಿಂಗಪುರ, ಸಿದ್ದಾಪುರ ಮತ್ತಿತರ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ತಾ. 11 ರಂದು ಸಂಜೆ 6 ಗಂಟೆಗೆ ಸಮಿತಿ ವತಿಯಿಂದ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಉಮಾಮಹೇಶ್ವರ ಸ್ವಾಮಿಯವರ ಉತ್ಸವ ಹಾಗೂ ತೆಪ್ಪೋತ್ಸವ ನಡೆಯಲಿದೆ. ಮೂಡಲುಕೊಪ್ಪಲು, ನಲ್ಲೂರು, ಕೊಪ್ಪಲು, ಸಾಲುಕೊಪ್ಪಲು, ಶಿರಂಗಾಲ ಗೇಟ್, ಮಣಜೂರು ಹಾಗೂ ಶಿರಂಗಾಲಗಳಲ್ಲಿ ಉತ್ಸವದ ಮೆರವಣಿಗೆ ನಡೆಸಿದ ಬಳಿಕ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಆಕರ್ಷಕ ಮದ್ದುಗುಂಡು, ಬಾಣ ಬಿರುಸುಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತದೆ.

ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಸಿ. ರುದ್ರಪ್ಪ, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಎಸ್.ಎಸ್. ಮಹೇಶ್ ನೇತೃತ್ವದಲ್ಲಿ ವಾರ್ಷಿಕ ರಥೋತ್ಸವ ವಿವಿಧ ಪೂಜಾ ಕೈಂಕಾರ್ಯಗಳು ಜರುಗಲಿವೆ. ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗಾರಿಸಲಾಗುತ್ತದೆ. ತಳಿರು ತೋರಣಗಳಿಂದ ಗ್ರಾಮವನ್ನು ಶೃಂಗಾರಿಸಲಾಗುತ್ತದೆ.