ಮಡಿಕೇರಿ, ಮಾ. 7: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಪ್ರತಿಭೋತ್ಸವದ ಪ್ರಯುಕ್ತ ಕಾಲೇಜಿನ ಸಹಪಠ್ಯ ಚಟುವಟಿಕೆಗಳ ಸಮಿತಿ ವತಿಯಿಂದ ವಿದ್ಯಾರ್ಥಿಗಳೇ ತಯಾರಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಆಕರ್ಷಿಸಿತು. ನಿರುಪಯುಕ್ತ ಬಟ್ಟೆ, ಕಾಗದ ಮುಂತಾದ ವಸ್ತುಗಳನ್ನು ಬಳಸಿ ವಿದ್ಯಾರ್ಥಿಗಳೇ ಕ್ರಿಯಾತ್ಮಕ ವಸ್ತುಗಳನ್ನು ತಯಾರಿಸಿ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳ ಮೆಚ್ಚುಗೆಗೆ ಪಾತ್ರರಾದರು. ಬಹುತೇಕ ನಿರುಪಯುಕ್ತ ವಸ್ತುಗಳನ್ನೇ ಬಳಸಿಕೊಂಡು ಕಾಲೇಜಿನ ವಿದ್ಯಾರ್ಥಿಗಳು ಕಸದಿಂದ ರಸ ಮಾಡುವ ಬಗೆಯನ್ನು ಎಲ್ಲರಿಗೂ ಪರಿಚಯಿಸಿದ್ದು ವೈಶಿಷ್ಠ್ಯತೆಯಿಂದ ಕೂಡಿತ್ತು.
ತಾವೇ ತಯಾರಿಸಿದ ಕರಕುಶಲ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಮಣ್ಣಿನ ಮಡಿಕೆಯ ಮೇಲೆ ಬಿಡಿಸಲಾಗಿದ್ದ ಚಿತ್ತಾರ, ಅಲಂಕಾರಿಕ ವಸ್ತುಗಳು, ಹಳೆಯ ಬಟ್ಟೆಯನ್ನು ಬಳಸಿ ತಯಾರಿಸಿದ್ದ ಮ್ಯಾಟ್‍ಗಳು, ಕ್ರಿಯಾತ್ಮಕವಾಗಿ ವಿದ್ಯಾರ್ಥಿಗಳು ಬಿಡಿಸಿದ್ದ ಪ್ರಕೃತಿ ಸೌಂದರ್ಯದ ಚಿತ್ರಕಲೆಗಳು, ನೀರಿನಲ್ಲಿ ಸ್ವಚ್ಛಂದವಾಗಿ ಈಜಾಡುವ ಬಣ್ಣದ ಮೀನು, ಪ್ರೀತಿಯ ಸಂಕೇತವಾದ ಕೆಂಬಣ್ಣದ ಗುಲಾಬಿ ಹೂವಿನ ಚಿತ್ರ ವಿದ್ಯಾರ್ಥಿಗಳಲ್ಲಿನ ಸೃಜನಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿತ್ತು. ಪರಿಮಳವನ್ನು ಬೀರದೆ, ಕಣ್ಣಿಗೆ ಮಾತ್ರವೇ ರಸದೌತಣ ನೀಡುತ್ತಿದ್ದ ಕಾಗದದ ಹೂವುಗಳು ಸಹ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.