ಗೋಣಿಕೊಪ್ಪಲು, ಮಾ.5: ಕಾಫಿ ತೋಟವೊಂದರಲ್ಲಿ ಕರಿಮೆಣಸು ಕುಯ್ಯುವ ಸಂದರ್ಭ ಸಮೀಪದಲ್ಲಿದ್ದ ವಿದ್ಯುತ್ ತಂತಿಗೆ ಅಲ್ಯೂಮಿನಿಯಮ್ ಏಣಿ ತಗುಲಿದ ಪರಿಣಾಮ ಸ್ಥಳದಲ್ಲೆ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ದ.ಕೊಡಗಿನ ಕುಂದ ಸಮೀಪದ ಈಚೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಶೋರಿಬಾ (45) ಅವರು ಮಗಳು ಅಸೀನಾ (20) ಎಂದು ಗುರುತಿಸಲಾಗಿದ್ದು; ಮಹಿಳೆಯರಿಬ್ಬರು ಮೂಲತ ಅಸ್ಸಾಂನ ಶಹನ್ ಪೂರ್ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಕಳೆದ ಹಲವು ಸಮಯದಿಂದ ಕೂಲಿ ಕೆಲಸಕ್ಕಾಗಿ ಕೊಡಗಿಗೆ ಆಗಮಿಸಿದ್ದರು.
ಗುರುವಾರ ಎಂದಿನಂತೆ ಕೆಲಸ ಆರಂಭಿಸಿದ ಕಾರ್ಮಿಕರು ತೋಟದಲ್ಲಿ ಮೆಣಸು ಕುಯ್ಯುವ ಕೆಲಸದಲ್ಲಿ ತೊಡಗಿದ್ದರು. ಸಂಜೆ 4.45 ರ ವೇಳೆ ತಾಯಿ ಹಾಗೂ ಮಗಳು ಒಟ್ಟಿಗೆ ತೆರಳಿದ ಸಂದರ್ಭದಲ್ಲಿ ಸಮೀಪದ 11 ಕೆ.ವಿ.ವಿದ್ಯುತ್ ಲೈನ್ ಅನ್ನು ಗಮನಿಸದೆ ಅಲ್ಯೂಮಿನಿಯಮ್ ಏಣಿಯನ್ನು ಬಳಸಿ ಮೆಣಸು ಕುಯ್ಯುವ ಸಂದರ್ಭ ಆಕಸ್ಮಿಕವಾಗಿ ಏಣಿಯು ಜಾರಿ ವಿದ್ಯುತ್ ಲೈನ್‍ಗೆ ತಗುಲಿದೆ ಎನ್ನಲಾಗಿದೆ.
ಕ್ಷಣಾರ್ಧದಲ್ಲಿ ತಾಯಿ ಮಗಳು ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಡಿವೈಎಸ್ ಪಿ. ಜಯಕುಮಾರ್ , ಸರ್ಕಲ್ ಇನ್ಸ್ ಪೆಕ್ಟರ್ ರಾಮರೆಡ್ಡಿ ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿ ಗೋಣಿಕೊಪ್ಪ ಚೆಸ್ಕಾಂ ಕಛೇರಿಯ ಇಂಜಿನಿಯರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕಾಫಿ ತೋಟದ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ದೇಹಗಳನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ. ತೋಟದ ಮಾಲೀಕ ಎ.ರಮೇಶ್ ಬೆಂಗಳೂರಿನಲ್ಲಿ ನೆಲೆಸಿದ್ದು ತೋಟದ ಜವಾಬ್ದಾರಿಯನ್ನು ದಯಾನಂದ ಎಂಬ ವ್ಯಕ್ತಿಯು ನೋಡಿಕೊಳ್ಳುತ್ತಿದ್ದರು ಎಂದು ಡಿವೈಎಸ್ಪಿ ಜಯಕುಮಾರ್ ‘ಶಕ್ತಿ' ಗೆ ತಿಳಿಸಿದ್ದಾರೆ.