ಸುಂಟಿಕೊಪ್ಪ, ಮಾ.6:ಮನೆಯ ಮಾಲೀಕರು ಹೊರ ಊರಿಗೆ ತೆರಳಿದ್ದ ಸಂದರ್ಭ ಮನೆಯ ಹಿಂಭಾಗದ ಹೆಂಚನ್ನು ತೆಗೆದು ಒಳನುಗ್ಗಿದ ಕಳ್ಳರು; ನಗದು, ಚಿನ್ನಾಭರಣ ಸಿಗದಿದ್ದಾಗ ಕಂಚಿನ ದೀಪ, ಕತ್ತಿ, 5 ಬಾಟಲಿ ವಿದೇಶಿ ಮದ್ಯವನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ಸಮೀಪದ ಅತ್ತೂರು ನಲ್ಲೂರು ಗ್ರಾಮದ ಮತ್ತಿಕಾಡು ದೇವಿ ತೋಟದ ಮಾಲೀಕರಾದ ಚೊಟ್ಟೇರ ಶಾರದಾ ಮೇದಪ್ಪ ಅವರು ಅನಾರೋಗ್ಯದ ನಿಮಿತ್ತ ಬೆಂಗಳೂರಿಗೆ ಚಿಕಿತ್ಸೆಗೆ ತೆರಳಿದಾಗ ತಾ. 2 ರಂದು ರಾತ್ರಿ ವೇಳೆ ಅವರ ಮನೆಯ ಹಿಂಬಾಗಿಲಿನ ಹೆಂಚು ತೆಗೆದು ಒಳಗೆ ನುಗ್ಗಿದ ಚೋರರು ಕಬ್ಬಿಣದ ಕಪಾಟು ಒಡೆಯಲು ಪ್ರಯತ್ನಿಸಿದ್ದು; ಅದು ಸಫಲವಾಗದಿ ದ್ದಾಗ ಕಂಚಿನ ದೀಪ, ಚಾಕು, ಕತ್ತಿ ಬ್ಯಾಗು ಹಾಗೂ 5 ಬಾಟಲಿ ವಿದೇಶಿ ಮದ್ಯವನ್ನು ಎಗರಿಸಿ ನೆಲ ಭಾಗಕ್ಕೆ ಮೆಣಸಿನ ಪುಡಿಯನ್ನು ಎರಚಿ ಪರಾರಿಯಾಗಿದ್ದಾರೆಂದು ಸುಂಟಿಕೊಪ್ಪ ಠಾಣೆಗೆ ತೋಟದ ಮಾಲೀಕರು ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶ್ವಾನದಳವನ್ನು ಕರೆಯಿಸಿದ್ದು ಮೊಕದ್ದಮೆ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.