ಮಡಿಕೇರಿ, ಮಾ. 5: ರಾಜ್ಯ ಸರ್ಕಾರದ ಸಹಕಾರಿ ಸಾಲ ಮನ್ನಾ ಯೋಜನೆಯಡಿ ಅಲ್ಪಾವಧಿ ಬೆಳೆ ಸಾಲ ಪಡೆದು 2018ರ ಜುಲೈ 10ಕ್ಕೆ ಹೊರಬಾಕಿ ಉಳಿಸಿಕೊಂಡ ರೈತ ಕುಟುಂಬದ ಗರಿಷ್ಠ ರೂ. 1 ಲಕ್ಷಗಳವರೆಗಿನ ಸಾಲ ಮನ್ನಾಗೆ ಸಂಬಂಧಿಸಿದಂತೆ 32,903 ರೈತರು ಸಾಲಮನ್ನಾಕ್ಕಾಗಿ ಹೊರಬಾಕಿ ಉಳಿಸಿಕೊಂಡಿದ್ದು, ರೂ. 254.81 ಕೋಟಿ ಸಾಲದ ಮೊತ್ತವನ್ನು ಮನ್ನಾ ಮಾಡಬೇಕಿದೆ.
ಒಟ್ಟಾರೆ ಈ ವರೆಗೂ 25,557 ಜನ ರೈತರ ಸಹಕಾರಿ ಸಾಲ ಮನ್ನಾ ಯೋಜನೆಯಡಿ ಗರಿಷ್ಠ ರೂ. 1 ಲಕ್ಷಗಳವರೆಗಿನ ಸಾಲ ಮನ್ನಾ ಮಾಡಲಾಗಿದೆ. ಒಟ್ಟು ರೂ. 197.49 ಕೋಟಿಗಳಷ್ಟು ಮೊತ್ತವನ್ನು ಸರ್ಕಾರ ಬಿಡುಗಡೆಗೊಳಿಸಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ತಿಳಿಸಿದ್ದಾರೆ.
ಇನ್ನುಳಿದಂತೆ 7,346 ಜನ ರೈತರ ಸಾಲಮನ್ನಾ ಆಗಲು ಬಾಕಿ ಇದ್ದು, ಆಧಾರ್ ಕಾರ್ಡ್ನಲ್ಲಿ ಹೆಸರು ಬದಲಾವಣೆಗೊಂಡಿರುವ, ಭೂ ಪರಿಶೀಲನೆ ಸಂದರ್ಭ ತಾಂತ್ರಿಕ ವ್ಯತ್ಯಾಸಗಳಿಂದ, ಫಲಾನುಭವಿಯು ಸರ್ಕಾರಿ ನೌಕರನಾಗಿದ್ದು, ರೇಷನ್ ಕಾರ್ಡ್ ಪರಿಶೀಲನೆಯು ವಿಫಲವಾಗಿರುವುದು ಸೇರಿದಂತೆ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಸಾಲಮನ್ನಾ ಮಾಡಲು ಸಮಸ್ಯೆಗಳು ಉಂಟಾಗಿದ್ದು ಈ ಪ್ರಕ್ರಿಯೆಯಲ್ಲಿ ಕೊಡಗು ಡಿಸಿಸಿ ಬ್ಯಾಂಕಿನ ಪಾತ್ರವೇನು ಇರುವುದಿಲ್ಲ. ಸರ್ಕಾರದ ಹಂತದಲ್ಲಿ ಬಿಡುಗಡೆಗೆ ಕ್ರಮವಹಿಸಬೇಕಾಗಿರುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ತಿಳಿಸಿದ್ದಾರೆ.
ಕೊಡಗು ಡಿಸಿಸಿ ಬ್ಯಾಂಕಿನಿಂದ ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆ, ಬಡ್ಡಿ ಮನ್ನಾ ಯೋಜನೆ ಮತ್ತು ಸಾಲ ಮನ್ನಾ ಯೋಜನೆಗಳಡಿ ಸರ್ಕಾರದ ಮಂಜೂರಾತಿ ಕೋರಿ ಸಲ್ಲಿಸಲಾದ ಕ್ಲೇಂ ಬಿಲ್ಲುಗಳ ಪೈಕಿ: ಶೂನ್ಯ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲದ ಯೋಜನೆಯಡಿ ಸಲ್ಲಿಸಲಾದ ವ್ಯತ್ಯಾಸದ ಬಡ್ಡಿ ಸಹಾಯಧನ ರೂ. 32.18 ಕೋಟಿ ಬಿಡುಗಡೆಗೆ ಬಾಕಿ ಇರುತ್ತದೆ. ಶೇ. 3 ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಕೃಷಿ ಸಾಲದ ಬಡ್ಡಿ ರಿಯಾಯಿತಿ ಯೋಜನೆಯಡಿ ಸಲ್ಲಿಸಲಾದ ರೂ. 7.43 ಕೋಟಿ ಬಿಡುಗಡೆಗೆ ಬಾಕಿ ಇರುತ್ತದೆ.
ರೂ. 50 ಸಾವಿರದ ಪೈಕಿ 2017ರ ಸಾಲ ಮನ್ನಾ ಯೋಜನೆಯಡಿ ಸಲ್ಲಿಸಲಾಗಿದ್ದ ರೂ. 15019.70 ಲಕ್ಷ ಕ್ಲೇಂ ಪೈಕಿ ರೂ. 14014.87 ಲಕ್ಷ ಬಿಡುಗಡೆಗೊಂಡಿದ್ದು, ರೂ. 1004.83 ಲಕ್ಷ ಬಿಡುಗಡೆಗೆ ಬಾಕಿ ಇರುತ್ತದೆ. ರೂ. 1,00,000 ದ ಪೈಕಿ 2018ರ ಸಾಲ ಮನ್ನಾ ಯೋಜನೆಯಡಿ ಗ್ರೀನ್ ಲೀಸ್ಟ್ ವ್ಯಾಪ್ತಿಗೆ ಒಳಪಟ್ಟು ಅರ್ಹರಿದ್ದ ಸಾಲಗಾರರಿಗೆ ರೂ. 19748.83 ಲಕ್ಷ ಬಿಡುಗಡೆಗೊಂಡಿದ್ದು, ಇನ್ನು ಗ್ರೀನ್ ಲೀಸ್ಟ್ ವ್ಯಾಪ್ತಿಗೆ ಒಳಪಡಲು ಬಾಕಿ ಇರುವ 4792 ರೈತರ ರೂ. 3318.18 ಲಕ್ಷ ಬಿಡುಗಡೆಗೆ ಬಾಕಿ ಇರುವುದಾಗಿ ಅಂದಾಜಿಸಲಾಗಿದೆ. ಸ್ವಸಹಾಯ ಗುಂಪಿನ ಸಾಲ ಯೋಜನೆಯಡಿ ಸಲ್ಲಿಸಲಾಗಿದ್ದ ರೂ. 49.56 ಲಕ್ಷ ಬಡ್ಡಿ ರಿಯಾಯಿತಿ ಕ್ಲೇಂ ಪೈಕಿ ರೂ. 37.20 ಲಕ್ಷ ಬಿಡುಗಡೆಗೊಂಡಿದ್ದು, ರೂ. 12.36 ಲಕ್ಷ ಬಿಡುಗಡೆಗೆ ಬಾಕಿ ಇರುತ್ತದೆ. ಕಾಯಕ ಯೋಜನೆಯಡಿ ರೂ. 2.11 ಲಕ್ಷ ಬಡ್ಡಿ ರಿಯಾಯಿತಿ ಕ್ಲೇಂ ಸಲ್ಲಿಸಲಾಗಿದ್ದು, ಈ ಪೈಕಿ ರೂ. 0.52 ಲಕ್ಷ ಬಿಡುಗಡೆಗೊಂಡಿದ್ದು, ರೂ. 1.59 ಲಕ್ಷ ಬಿಡುಗಡೆಗೆ ಬಾಕಿ ಇರುತ್ತದೆ ಎಂದು ಕೊಡಗು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾಹಿತಿ ನೀಡಿದ್ದಾರೆ.