ಮಡಿಕೇರಿ, ಮಾ.6: ಶಿಕ್ಷಣ ಬುದ್ಧಿಯನ್ನು ಬೆಳೆಸಿದರೆ, ಕಲೆ ಹೃದಯವನ್ನು ಬೆಳೆಸುತ್ತದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ನಡೆದ 71 ನೇ ವರ್ಷದ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿನಲ್ಲಿ ಎಂದಿಗೂ ನಡೆದು ಬಂದ ಹಾದಿಯನ್ನು ಮರೆಯ ಬಾರದು. ಜೀವನಾನುಭವದ ಘಟನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಜೊತೆಗೆ ಈ ಕಾಲೇಜು ನೂರಾರು ಪ್ರತಿಭಾನ್ವಿತರನ್ನು ಸಮಾಜಕ್ಕೆ ನೀಡಿದೆ ಎಂದು ನುಡಿದರು.

ಕಾಲೇಜಿನಲ್ಲಿ ಸೌಹಾರ್ದಯುತ ವಾತಾವರಣ ಇರಬೇಕು. ಪ್ರತಿಭೋತ್ಸವ ಗಳು ನಮ್ಮಲ್ಲಿನ ಕ್ರೀಡೆ, ಸಾಹಿತ್ಯ ಮತ್ತು ಅಭಿರುಚಿಗಳನ್ನು ಹೊರತರಲು ಸಹಕಾರಿಯಾಗುತ್ತದೆ. ಶಿಕ್ಷಣದ ಜೊತೆಗೆ ಕಲೆ, ಸಂಗೀತ, ಕ್ರೀಡೆಯನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.

ಕಲಾಪ್ರಜ್ಞೆ ಇದ್ದರೆ ಮಾತ್ರವೇ ಮಾನವೀಯ ಗುಣಗಳು ನಮ್ಮಲ್ಲಿರಲು ಸಾಧ್ಯ, ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ಸಮಾಜಮುಖಿಯಾಗಿ ಜೀವಿಸಬೇಕು. ಮಹಾತ್ಮರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕೆ.ಸುಬ್ರಮಣಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿ ಕೊಳ್ಳುವತ್ತ ಚಿಂತನೆ ಮಾಡಬೇಕು. ಶಿಕ್ಷಕರು ಮತ್ತು ಪೆÇೀಷಕರಿಂದ ಇದಕ್ಕೆ ತಕ್ಕ ಬೆಂಬಲ ದೊರೆಯಲಿದ್ದು, ತಮ್ಮ ಭವಿಷ್ಯವನ್ನು ತಾವೇ ರೂಪಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.

ಎಂದಿಗೂ ಸಮಯವನ್ನು ವ್ಯರ್ಥ ಮಾಡಬೇಡಿ. ಬದುಕಿನಲ್ಲಿ ಪ್ರತಿ ಕ್ಷಣವೂ ಅಮೂಲ್ಯವಾದುದು ಇದನ್ನು ಕಳೆದುಕೊಳ್ಳುವಂತಾಗಬಾರದು. ಸಮಯದ ಸದ್ಬಳಕೆಯನ್ನು ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು. ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಿ ಆ ನಿಟ್ಟಿನಲ್ಲಿ ಜೀವನದಲ್ಲಿ ಬರುವ ಅವಕಾಶಗಳನ್ನು ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ ಬಳಸಿಕೊಳ್ಳಬೇಕು ಎಂದು ಅವರು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರು, ಕಾಲೇಜಿನಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯ, ಸಾಕಷ್ಟು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದೀರಿ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದರು.

ಇದೇ ವೇಳೆ ಹಾಕಿ ಕ್ರೀಡೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲ ಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಮತ್ತು ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನ ಪರವಾಗಿ ಸನ್ಮಾನಿಸ ಲಾಯಿತು. ಜೊತೆಗೆ ಕಾಲೇಜಿನ ವತಿಯಿಂದ ಆಯೋಜಿಸಿದ್ದ ವಿವಿಧ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ.ಈ.ತಿಪ್ಪೇಸ್ವಾಮಿ, ಸಹಪಠ್ಯ ಚಟುವಟಿಕೆಯ ಸಂಚಾಲಕರಾದ ಡಾ.ಎಚ್.ಕೆ.ರೇಣುಶ್ರೀ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪ್ರತೀಕ್ ಶೆಟ್ಟಿ ಬಿ.ಎಸ್, ಲಿಶಾಲ್ ಬೆನ್ನಿ, ಮೊನಿಷ ಜಿ, ಲೀನಾ ಕೆ.ಎಲ್. ಮಂಜುನಾಥ್, ಪಿ.ಆರ್. ಸುಚಿತ್, ಟಿ.ಆರ್.ಅಜಿತ್ ಎಂ.ಎಸ್.ಜಿಸ್ಮ, ರೆಜಿನ ಪಿ.ಸಿ, ವಿದ್ಯಾ ಕೆ.ಎಸ್ ಸೇರಿದಂತೆ ಇತರರು ಇದ್ದರು.