*ಸಿದ್ದಾಪುರ, ಮಾ. 6: ಅದು ಹಲವು ದಶಕಗಳ ಸಮಸ್ಯೆ, ಹೊಳೆ ಬದಿ ನಿವಾಸಿಗಳ ಆತಂಕ ನೀರಿನಷ್ಟು ಸುಲಭವಾಗಿ ಸರಿದು ಹೋಗುವಂತಿರಲಿಲ್ಲ. ಮಳೆಗಾಲ ಬಂತೆಂದರೆ ಜೀವಭಯ ಇವರನ್ನು ಕಾಡುತ್ತದೆ, ಸೂರು ಕಳೆದುಕೊಳ್ಳುವ ಅತಂತ್ರ ಪರಿಸ್ಥಿತಿ ಎದುರಾಗುತ್ತದೆ. ಆದರೆ ಇಲ್ಲಿನ ನಿವಾಸಿಗಳಿಗೀಗ ಹೊಸ ವಿಶ್ವಾಸವೊಂದು ಮೂಡಲು ಆರಂಭವಾಗಿದೆ, ರಾಜ್ಯದಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ.

ಜಿಲ್ಲೆಯ ವಿವಿಧೆಡೆ ಸರ್ಕಾರಿ ಜಾಗದಲ್ಲಿ ಬಡ ಹಾಗೂ ಕಾರ್ಮಿಕ ವರ್ಗದ ಅನೇಕ ಕುಟುಂಬಗಳು ಆಶ್ರಯ ಪಡೆದಿವೆ. ಇಂದಿನ ದುಬಾರಿ ಯುಗದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಳ್ಳುವುದು ಕನಸಿನ ಮಾತು ಎಂದು ಅಸಹಾಯಕರಾಗಿರುವವರು ಪೈಸಾರಿ ಜಾಗಗಳಲ್ಲಿ ತಮ್ಮ ಬದುಕು ಸಾಗಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಮನೆ ಮತ್ತು ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದವರಿಗೆ ಕಳೆದ ಎರಡು ವರ್ಷಗಳಿಂದ ಪ್ರಕೃತಿ ಗಾಯದ ಮೇಲೆ ಬರೆ ಎಳೆಯಲು ಆರಂಭಿಸಿದೆ.

ನೆಲ್ಯಹುದಿಕೇರಿ ಭಾಗದಲ್ಲೂ ಪ್ರಕೃತಿಗೆ ವಿರುದ್ಧವಾಗಿ ಮನೆಗಳು ನಿರ್ಮಾಣಗೊಂಡಿವೆ ಎನ್ನುವ ಆರೋಪಗಳಿವೆ. ಆದರೆ ಹೊಳೆ ಬದಿಯಲ್ಲಿ ಆಶ್ರಯ ಪಡೆಯುತ್ತಿದ್ದವರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೋರಿದ ಮೃದು ಧೋರಣೆಯೇ ಇಂದು ಅನೇಕರು ಸಂತ್ರಸ್ತರಾಗಲು ಕಾರಣವೆಂದು ಹೇಳಲಾಗುತ್ತಿದೆ. ಮನೆ ನಿರ್ಮಿಸುವ ಸಂದರ್ಭದಲ್ಲೇ ಸಂಬಂಧಿಸಿದವರು ತಡೆಯೊಡ್ಡಿದ್ದರೆ ಇಂದು ಸರ್ಕಾರಕ್ಕೂ ಹೊರೆಯಾಗುತ್ತಿರಲಿಲ್ಲ, ಸಂತ್ರಸ್ತರು ಬೀದಿ ಪಾಲಾಗುತ್ತಿರಲಿಲ್ಲ.

ಕಳೆದ ವರ್ಷ ಸುರಿದ ಮಹಾಮಳೆಯಿಂದ ಎದುರಾದ ಪ್ರವಾಹಕ್ಕೆ ಸಿಲುಕಿ ಸುಮಾರು 214 ಮನೆಗಳು ಹಾನಿಗೀಡಾಗಿದ್ದವು, ಇವುಗಳಲ್ಲಿ ಅನೇಕ ಮನೆಗಳು ಸಂಪೂರ್ಣ ನಾಮಾವಶೇಷಗೊಂಡಿದ್ದವು. ಪ್ರತಿವರ್ಷ ಪ್ರವಾಹ ಬಂದಾಗಲೂ ಹೊಳೆ ಬದಿಯಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಂಡು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯವುದು, ಮಳೆನಿಂತ ಮೇಲೆ ಮತ್ತೆ ಬಂದು ಹೊಳೆ ಬದಿಯಲ್ಲೇ ವಾಸ ಮಾಡುವುದು ವಾಡಿಕೆಯಾಗಿತ್ತು. ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ದೊರೆಯದೆ ಇಲ್ಲಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದರಲ್ಲದೆ, ಪ್ರತಿವರ್ಷ ಪರಿಹಾರದ ಹಣವನ್ನು ನೀಡುವ ಮೂಲಕ ಸರ್ಕಾರವೂ ಆರ್ಥಿಕ ಹೊರೆಯನ್ನು ಸಹಿಸಿಕೊಳ್ಳಬೇಕಾಗಿತ್ತು. ಆದರೆ 2019 ರಲ್ಲಿ ಉಂಟಾದ ಅತಿವೃಷ್ಟಿ ಶಾಶ್ವತ ಪರಿಹಾರ ಆಗಲೇಬೇಕೆಂಬ ರೀತಿಯಲ್ಲಿ ನಷ್ಟವನ್ನುಂಟು ಮಾಡಿದೆ.

ಇದರಿಂದ ಎಚ್ಚೆತ್ತುಕೊಂಡ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಹೊಳೆ ಬದಿ ನಿವಾಸಿಗಳಿಗೆ ಶಾಶ್ವತ ಮತ್ತು ಸುರಕ್ಷಿತ ಸೂರನ್ನು ಪರ್ಯಾಯ ಪ್ರದೇಶದಲ್ಲಿ ನೀಡಲೇಬೇಕೆಂದು ಚಿಂತನೆ ನಡೆಸಿ ಕಾರ್ಯೋನ್ಮುಖರಾದ ಪರಿಣಾಮ ಇದೀಗ ಸಂತ್ರಸ್ತರು ನಿವೇಶನ ಪಡೆಯುವ ಹಂತಕ್ಕೆ ಬಂದು ತಲುಪಿದ್ದಾರೆ. ಶಾಸಕರ ಪ್ರಯತ್ನಕ್ಕೆ ಪೂರಕವಾಗಿ ಜಿಲ್ಲಾಡಳಿತವೂ ಸರ್ಕಾರಿ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಅಭ್ಯತ್ ಮಂಗಲದ ಸರ್ವೆ ಸಂಖ್ಯೆ 87/2 ರಲ್ಲಿ ಕೆ.ಟಿ. ಅಬ್ದುಲ್ಲ ಎಂಬವರು ಒತ್ತುವರಿ ಮಾಡಿಕೊಂಡಿದ್ದ ಸುಮಾರು ಏಳು ಎಕರೆ ಪ್ರದೇಶವನ್ನು ತನ್ನ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಈ ಜಾಗವನ್ನು ಮಳೆಹಾನಿ ಸಂತ್ರಸ್ತರಿಗೆ ಹಂಚಿಕೆ ಮಾಡಲು ಯೋಜನೆ ರೂಪಿಸಿದೆ. ನೆಲ್ಯಹುದಿಕೇರಿಯ ಸುಮಾರು 130 ಕುಟುಂಬಗಳಿಗೆ ತಲಾ ಎರಡು ಮುಕ್ಕಾಲು ಸೆಂಟ್ ನಂತೆ ವಿತರಿಸಲು ಈಗಾಗಲೇ ಫಲಾನುಭವಿಗಳನ್ನು ಗುರುತಿಸಲಾಗಿದೆ. ಸಧ್ಯದಲ್ಲೇ ಸಂತ್ರಸ್ತರು ನಿವೇಶನದ ಹಕ್ಕುಪತ್ರ ಪಡೆಯಲಿದ್ದಾರೆ.

ಸುರಕ್ಷಿತ ಪ್ರದೇಶದಲ್ಲಿ ಶಾಶ್ವತ ನೆಲೆ ಕಂಡುಕೊಳ್ಳುವ ಕನಸನ್ನು ಕೂಡ ಕಾಣಲಾಗದ ಪರಿಸ್ಥಿತಿಯಲ್ಲಿದ್ದ ಹೊಳೆ ಬದಿ ನಿವಾಸಿಗಳು ಇದೀಗ ಹಲವು ದಶಕಗಳ ಸಮಸ್ಯೆಯಿಂದ ಹೊರ ಬಂದು ಅಧಿಕೃತವಾದ ನಿವೇಶನದ ಒಡೆಯರಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಮಳೆಗಾಲದ ಸಂದರ್ಭ ತಾತ್ಕಾಲಿಕ ಪರಿಹಾರಗಳನ್ನು ಸೂಚಿಸಿ, ಈಡೇರದ ಭರವಸೆಗಳನ್ನು ಘೋಷಿಸಿ, ಮೊಸಳೆ ಕಣ್ಣೀರು ಹಾಕುತ್ತಾ ಕಾಲಹರಣ ಮಾಡುತ್ತಿದ್ದವರ ವಿರುದ್ಧ ಇವರ ಅಸಮಾಧಾನವಿದೆ. ತಡವಾಗಿಯಾದರೂ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ಒತ್ತುವರಿಯಾದ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ನಿರಾಶ್ರಿತರಿಗೆ ಹಂಚಿಕೆ ಮಾಡಲು ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಪ್ರಕೃತಿ ಮುನಿಸಿಕೊಳ್ಳುವ ರೀತಿ ಅಕ್ರಮವಾಗಿ ಹೊಳೆ ಬದಿ ನೆಲೆ ನಿಂತಿದ್ದವರಿಗೆ ಪ್ರಕೃತಿಯೇ ಸಕ್ರಮದ ಹಾದಿ ತೋರಿಸಿಕೊಟ್ಟಿರುವುದು ಮಾತ್ರ ವಿಶೇಷ.

- ಅಂಚೆಮನೆ ಸುಧಿ