ಮಡಿಕೇರಿ, ಮಾ. 6: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೋವಲ್ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ‘ಭಯಬೇಡ ಎಚ್ಚರವಿರಲಿ’ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಸಾರುವ ಮೂಲಕ ನಗರದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.

ನಗರದ ಸರ್ಕಾರಿ ಮತ್ತು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು, ಶುಶ್ರೂಷಕರು ಮತ್ತು ಸಿಬ್ಬಂದಿಗಳು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. ಕೊರೊನಾ ವೈರಸ್ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ, ‘ಕೊರೊನಾ ವೈರಸ್ ಬಗ್ಗೆ ಭಯ ಬೇಡ ಎಚ್ಚರವಿರಲಿ ಎಂಬ ಘೋಷಣೆಗಳ ಮೂಲಕ ಪ್ರಯಾಣಿಕರು ಮತ್ತು ಜನ ಸಾಮಾನ್ಯರಿಗೆ ಅರಿವು ಮೂಡಿಸಿದರು.

ಬ್ಯಾನರ್‍ನಲ್ಲಿ ಕೊರೊನಾ ವೈರಸ್‍ನ ಲಕ್ಷಣಗಳು ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ತೊಂದರೆಗಳ ರೋಗ ಲಕ್ಷಣಗಳಿದ್ದರೆ, ಆಗ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಿರಿ ಎಂದು ಅವರು ಸಲಹೆ ಮಾಡಿದರು.

ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ಕೈಯನ್ನು ಚೆನ್ನಾಗಿ ಆಗಾಗ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳಬೇಕು ಹಾಗೂ ಮಾಸ್ಕ್‍ಗಳನ್ನು ಧರಿಸಬೇಕು. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮುಚ್ಚಿಕೊಳ್ಳಬೇಕು. ಅನಾರೋಗ್ಯದಿಂದಿರುವ ಅಥವಾ ಕೆಮ್ಮು ಮತ್ತು ನೆಗಡಿ ಮತ್ತಿತರ ಅನಾರೋಗ್ಯದ ಲಕ್ಷಣ ಹೊಂದಿರುವ ಜನಗಳೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಪ್ರಾಣಿಗಳ ನೇರ ಸಂಪರ್ಕವನ್ನು ಹಾಗೂ ಬೇಯಿಸದ ಕಚ್ಚಾ ಮಾಂಸ ಸೇವನೆ ಮಾಡಬಾರದು ಎಂಬ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸಿದರು.