ವೀರಾಜಪೇಟೆ, ಮಾ. 3: ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುತ್ತಮಕ್ಕಿ ಎಂಬಲ್ಲಿನ ವೀರಾಜಪೇಟೆ ಕರಡ ಸಂಪರ್ಕದ ಕಾಂಕ್ರಿಟ್ ರಸ್ತೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸದಸ್ಯ ಎಂ.ಎಂ. ಪರಮೇಶ್ವರ್ ಮಾತನಾಡಿ, ಗ್ರಾಮದ ಪುತ್ತಮಕ್ಕಿ ಸೇತುವೆಯಿಂದ ಹಾನಿಗೊಳಗಾಗಿದ್ದ ಸುಮಾರು 500 ಮೀಟರ್ ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ಪರಿವರ್ತಿಸಲಾಗಿದ್ದು ಗ್ರಾಮಸ್ಥ್ತರು ಕಾಮಗಾರಿ ಮೇಲೆ ನಿಗಾ ಇಟ್ಟಿದ್ದರಿಂದ ರಸ್ತೆ ಗುಣಮಟ್ಟ ಕಾಪಾಡಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳಾದ ಕಿರಣ್, ಚುಕ್ಕು ದೇವಯ್ಯ, ಮಾತಂಡ ಮೊಣ್ಣಪ್ಪ, ಮಾಳೇಟಿರ ಕಾವೇರಪ್ಪ, ಮಲ್ಲಂಡ ಮಧು ದೇವಯ್ಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಸುರೇಶ್, ಯತೀಶ್, ಪಿ. ಮನು ಹಾಜರಿದ್ದರು.