ಮಡಿಕೇರಿ, ಮಾ.3 : ಭಾರತೀಯ ಅಂಚೆ ಇಲಾಖೆ ವತಿಯಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮಹಾಮೇಳ ಏರ್ಪಡಿಸಲಾಗಿದೆ. ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳ ವ್ಯಾಪ್ತಿಗೆ ಬರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ಮಹಾಮೇಳ ಹಮ್ಮಿಕೊಳ್ಳಲಾಗಿದ್ದು, ಈ ಮೇಳದಲ್ಲಿ ವಿವಿಧ ಸೌಲಭ್ಯವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.

ಆಧಾರ್ ಜೋಡಣೆಗೊಂಡಿರುವ ಯಾವುದೇ ಬ್ಯಾಂಕ್ ಖಾತೆಯಿಂದ ಹಣವನ್ನು ಸಮೀಪದ ಅಂಚೆ ಕಚೇರಿಯಿಂದ ಅಥವಾ ಮನೆ ಬಾಗಿಲಿಗೆ ಬರುವ ಅಂಚೆಯಣ್ಣನ ಮೂಲಕ ಬೆರಳಚ್ಚಿನ ಸುರಕ್ಷಿತವಾದ ದೃಢೀಕರಣದ ಮೂಲಕ ಪಡೆಯಬಹುದಾಗಿದೆ. ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ದೊರಕುವ ಸಹಾಯಧನ, ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನ ಮತ್ತಿತರ ಅರ್ಹ ಫಲಾನುಭವಿಗಳು ಹಣ ಪಡೆಯಲು ದೂರದ ಬ್ಯಾಂಕ್‍ಗೆ ಅಲೆದಾಡುವ ಸಮಸ್ಯೆ ಇರುವುದಿಲ್ಲ.

ವ್ಯವಹಾರವು ಸಂಪೂರ್ಣ ಕಾಗದ ರಹಿತವಾಗಿದ್ದು, ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿರುವುದಿಲ್ಲ. ಮನೆಯಿಂದಲೇ ವಿದ್ಯುತ್ ಬಿಲ್ ಪಾವತಿ, ಡಿಟಿಎಚ್ ರೀಚಾರ್ಜ್, ಮೊಬೈಲ್ ರೀಚಾರ್ಜ್ ಮಾಡಬಹುದು. ಬೇರೆ ಬ್ಯಾಂಕ್‍ಗಳಿಂದ ಹಣ ಕಳುಹಿಸಬಹುದು ಹಾಗೂ ಇತರೆ ಬ್ಯಾಂಕ್‍ಗಳಿಂದ ಹಣವನ್ನು ಅಂಚೆ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಈ ಖಾತೆಗೆ ಅಂಚೆ ಉಳಿತಾಯ ಖಾತೆ ಜೋಡಿಸಿ ಅದಕ್ಕೆ ಹಣ ಹಾಕುವ ಅಥವಾ ತೆಗೆಯುವ ಸೌಲಭ್ಯ ಸಹ ಲಭ್ಯವಿದೆ. ಆರ್.ಡಿ, ಪಿಪಿಎಫ್, ಸುಕನ್ಯ ಸಮೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮಾ ಮಾಡಬಹುದು. ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡುವುದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‍ನ ಉದ್ದೇಶವಾಗಿದೆ.

ಸಾರ್ವಜನಿಕರು ಹತ್ತಿರದ ಅಂಚೆ ಕಚೇರಿಗಳಿಗೆ ತಾವು ಉಪಯೋಗಿಸುತ್ತಿರುವ ಮೊಬೈಲ್‍ನೊಂದಿಗೆ ಭೇಟಿ ನೀಡಿ ಅಥವಾ ಅಂಚೆಯಣ್ಣನ ಮೂಲಕ ಈ ಖಾತೆಗಳನ್ನು ತೆರೆಯುವುದರ ಮೂಲಕ ಡಿಜಿಟಲ್ ಬ್ಯಾಂಕ್ ಸೌಲಭ್ಯಗಳನ್ನು ಅತ್ಯಂತ ಸರಳವಾಗಿ ಮನೆಯಂಗಳದಲ್ಲಿಯೇ ಪಡೆದುಕೊಳ್ಳಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.