ಕೂಡಿಗೆ, ಮಾ. 2: ಜಿಲ್ಲಾ ಪಂಚಾಯಿತಿಯ ತೋಟಗಾರಿಕಾ ಇಲಾಖೆಯ ವತಿಯಿಂದ ಬಾಳೆ ಬೆಳೆ ಕ್ಷೇತ್ರೋತ್ಸವವು ಕೂಡಿಗೆ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದ ನಾಗೇಂದ್ರ ಅವರ ತೋಟದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ತೋಟಗಾರಿಕಾ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ತರಬೇತಿ ಹಾಗೂ ಕಾರ್ಯಾಗಾರದ ಮಾಹಿತಿ ಪಡೆದು ಪಾಲ್ಗೊಂಡು ತರಬೇತಿ ಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಮಾತ್ರವಲ್ಲದೆ, ಎಲ್ಲಾ ವರ್ಗದವರಿಗೂ ಇಲಾಖೆಯ ಸೌಲಭ್ಯಗಳು ಇರುತ್ತವೆ. ರೈತರು ಮಾಹಿತಿ ಪಡೆಯುವ ಮೂಲಕ ರಿಯಾಯಿತಿಯ ಸಹಾಯಧನವನ್ನು ಪಡೆದು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ತೋಟಗಾರಿಕಾ ಇಲಾಖೆಯ ವಿಷಯ ತಜ್ಞ ಪ್ರವೀಣ್ ಮಾತನಾಡಿ, ಬಾಳೆ ಬೆಳೆಯ ಸಾಧಕ-ಬಾಧಕ, ರೋಗ-ರುಜಿನಗಳ ಪರಿಹಾರದ ಬಗ್ಗೆ, ಆಧುನೀಕ ರೀತಿಯಲ್ಲಿ ಬಾಳೆ ಬೇಸಾಯ ಮಾಡುವ ಬಗ್ಗೆ ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮವಾದ ಬೆಳೆ ಬೆಳೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ವಹಿಸಿದ್ದರು. ಈ ಸಂದರ್ಭ ತಾಲೂಕು ಸಹಾಯಕ ತೋಟಗಾರಿಕಾ ಇಲಾಖೆಯ ಅಧಿಕಾರಿ ಮುದ್ದಪ್ಪ, ಕುಶಾಲನಗರ ಹೋಬಳಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಕಾವ್ಯ, ಪ್ರಗತಿಪರ ರೈತ ಡಿಸೋಜ ಸೇರಿದಂತೆ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಇದ್ದರು.