ಕಣಿವೆ, ಮಾ. 3: ಮನೆಯಲ್ಲಿನ ಅಡುಗೆ ಕೋಣೆಯಲ್ಲಿ ಬಳಸಿ ಬಿಸಾಕುವ ವಸ್ತುಗಳು, ಅಡುಗೆ ಖಾದ್ಯಕ್ಕೆ ಬಳಸುವ ಎಣ್ಣೆಯ ಬಾಟಲಿಗಳು, ಹಾಗೆಯೇ ದೇಹದ ಒಂದಷ್ಟು ಬಿಸಿಗೆ ಬಳಸುವ ಮದ್ಯದ ಬಾಟಲಿಗಳು, ಉತ್ತಮ ಆರೋಗ್ಯ ಹೊಂದಲು ತಿನ್ನುವ ಒಣ ಹಣ್ಣುಗಳ ಸಿಪ್ಪೆಗಳು ಸೇರಿದಂತೆ ಇನ್ನಷ್ಟು ಅನುಪಯುಕ್ತ ವಸ್ತುಗಳು ಈ ಇಂಜಿನಿಯರ್ ಕಲ್ಪನೆಯಲ್ಲಿ ಸಿದ್ಧಗೊಂಡು ಮನೆಯೊಳಗಿನ ಹಾಲ್‍ನ ಸೊಬಗು ಹೆಚ್ಚಿಸುವ ಷೋಕೇಸ್ ಒಳಗಿನ ಗೊಂಬೆಗಳು ಅಥವಾ ಪರಿಕರಗಳಾಗಿ ರೂಪು ಗೊಂಡು ನೋಡುಗರ ಗಮನಸೆಳೆಯುತ್ತವೆ.

ಈ ಇಂಜಿನಿಯರ್ ಹೆಸರು ವಿ.ಕೆ. ನಾರಾಯಣನ್, ಇವರು ಕುಶಾಲನಗರದ ಆದಿಶಂಕರಾ ಚಾರ್ಯ ಬಡಾವಣೆಯ ನಿವಾಸಿ. ಇವರು ಚೆಸ್ಕಾಂ ಇಲಾಖೆಯಲ್ಲಿ ಅಭಿಯಂತರರಾಗಿ ಕಾರ್ಯ ನಿರ್ವಹಿಸಿ ಇದೀಗ ನಿವೃತ್ತಗೊಂಡು ಹತ್ತು ವರ್ಷಗಳಾಗಿವೆ. ಇವರು ನಿವೃತ್ತಿ ಹೊಂದಿದ ನಂತರ ಸಮಯವನ್ನು ಕಳೆಯಲು ಇಂತಹ ಕಸೂತಿ ಕಲೆಯನ್ನು ಮೈಗೂಡಿಸಿ ಕೊಂಡಿರುವುದು ವಿಶೇಷ.

ಇವರ ಮನೆಯ ಒಳಗೆ ಮತ್ತು ಹೊರಗಿನ ಆವರಣದಲ್ಲಿ ಇದ್ದ ಅನುಪಯುಕ್ತ ವಸ್ತುಗಳನ್ನು ಬಳಸಿ ಹೊಸ ರೂಪ ನೀಡಿ ತಯಾರಿಸಿರುವ ಸಿದ್ಧ ವಸ್ತುಗಳು ಷೋಕೇಸ್ ಒಳಗೆ ಹೊಳೆಯುತ್ತಿವೆ. ತೆಂಗಿನ ಕಾಯಿ ಬಟ್ಟಲುಗಳಿಂದ ಕಪ್, ಸಾಸರ್, ಸೆಟ್ ಪಾತ್ರೆ ಮಾದರಿ ತಯಾರಿ, ಸೋರೆ ಕಾಯಿಗಳ ಖಾಲಿ ಬುರುಡೆಗಳನ್ನು ಬಳಸಿ ಮಾಡಿರುವ ಆಫ್ರಿಕನ್ ಪಕ್ಷಿ ಹಾಗೂ ಇತರೇ ಪಕ್ಷಿಗಳ ಮಾದರಿಯಂತು ಇನ್ನೂ ವಿಶೇಷ. ತೆಂಗಿನ ಕಾಯಿ ಚಿಪ್ಪಿನಿಂದ ಲೋಟಸ್, ಕ್ಯಾಂಡಲ್ ಸ್ಟ್ಯಾಂಡ್, ಖಾಲಿ ಬಾಟಲಿಗಳಿಂದ ಪಕ್ಷಿಗಳ ರಚನೆ, ಬಿಳಿ ಇಲಿ, ಚಿನ್ನದ ಪರ್ಸ್, ಉಪ್ಪಿನಕಾಯಿ ಹಾಕಿಡುವ ಜರಡಿ, ಮನುಷ್ಯನ ತಲೆ, ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯುವ ಬುಟ್ಟಿಗಳು, ಸನ್ಯಾಸಿಗಳು ಕೈಯಲ್ಲಿ ಹಿಡಿದು ಭಕ್ತರಿಗೆ ನೀಡುವ ತೀರ್ಥ ಪ್ರಸಾದ ನೀಡಲು ಬಳಸುವ ನೀರಿನ ಪಾತ್ರೆ, ಫ್ಯಾನ್ಸಿ ಲೈಟ್ ಅಳವಡಿಸುವ ಸಾಧನಗಳು ಸೇರಿದಂತೆ ಇನ್ನೂ ಅನೇಕ ಸಾಮಗ್ರಿಗಳ ರಚನೆ ನೋಡುಗರ ಕಣ್ಣುಗಳ ಹುಬ್ಬೇರಿಸುತ್ತದೆ.

ಈ ನಾರಾಯಣನ್ ಅವರ ಕೈನಲ್ಲಿ ಅರಳುವ ಚಿತ್ರಕಲೆಗಳು ವಿವಿಧ ವಿನ್ಯಾಸಗಳೊಂದಿಗೆ ವಿಭಿನ್ನವಾಗಿ ಮೂಡಿಬರುವುದು ನೋಡಿದರೆ ಇವರೊಳಗೆ ಒಬ್ಬ ಕಲಾಕಾರ ಇದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಇವರ ಈ ಕಲಾಕೃತಿಗಳ ರಚನೆಗಳನ್ನು ನೋಡಿ ನೆರೆಹೊರೆಯವರು ಮತ್ತು ಇವರ ಬಂಧುಗಳು ಮಾರು ಹೋಗಿದ್ದು, ಇವರ ಮನೆಗೆ ಬಂದು ಅಲ್ಲಿನ ಕಲಾಕೃತಿಗಳನ್ನು ನೋಡಿ ತಮ್ಮ ಮನೆಗೆ ಒಯ್ದು ಷೋಕೇಸ್‍ನಲ್ಲಿ ಇಟ್ಟುಕೊಳ್ಳುತ್ತಿದ್ದಾರೆ.

ಇವರು ತೆಂಗಿನ ಚಿಪ್ಪುಗಳಿಂದ ಮಾಡಿರುವ ಎರಡೂವರೆ ಅಡಿ ಎತ್ತರದ ದೀಪಗಳು ಹಾಗೂ ಬುದ್ಧನ ವಿಗ್ರಹ, ದೊಡ್ಡ ಪಕ್ಷಿಯೊಂದು ಮಗುವೊಂದನ್ನು ಎತ್ತಿಕೊಂಡು ಹೋಗುವಂತಹ ಚಿತ್ರಣ, ಸೋರೆಕಾಯಿಯಲ್ಲಿ ಆಮೆ, ಆಫ್ರಿಕನ್ ಪಕ್ಷಿ, ಸಮುದ್ರದಲ್ಲಿ ಕಾಣ ಸಿಗುವ ಸಣ್ಣ ಸಣ್ಣ ಚಿಪ್ಪುಗಳನ್ನು ಬಳಸಿ ಮಾಡಿರುವ ನವಿಲುಗಳ ಮಾದರಿ ಯಂತೂ ಪಕ್ಷಿ ಲೋಕ ನೋಡುಗರ ಸ್ಮೃತಿ ಪಟಲದಲ್ಲಿ ಅರೆ ಕ್ಷಣ ಹಾದು ಹೋದಂತೆ ಭಾಸವಾಗುತ್ತದೆ.

ಇನ್ನು ಹೊಂಬಾಳೆಯೊಂದನ್ನು ಬಳಸಿ ಬೋಟ್ ಮಾಡಿರುವ ಚಿತ್ರಣ, ಮನುಷ್ಯನ ತಲೆ ಹೀಗೆ ಒಂದಲ್ಲ ಎರಡಲ್ಲ ನಾನಾ ಬಗೆಯ ಚಿತ್ರಣಗಳು ಕಲಾಕಾರ ನಾರಾಯಣನ್ ಅವರ ಕೈಗಳ ರಚನೆಯಲ್ಲಿ ಅನುರಣಿಸಿವೆ.

ಇತ್ತೀಚಿನ ದಿನಗಳ ಇಂತಹ ರಚನೆಗಳನ್ನು ಹೆಚ್ಚು ಮಾಡುವ ಮೂಲಕ ಸಮಯವನ್ನು ಉತ್ತಮವಾಗಿ ಕಳೆಯುತ್ತಿರುವ ಇವರಿಗೆ ಇವರ ಪತ್ನಿ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಗೊಂಡಿರುವ ಕೆ.ಜಿ. ರತ್ನ ಸಹಕಾರ ನೀಡುತ್ತಿದ್ದಾರೆ.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ನಾರಾಯಣನ್, ನನಗೆ ಕಸವನ್ನು ರಸ ಮಾಡುವುದು ಮೊದಲಿಂದಲೂ ರೂಢಿ. ಕೆಲಸ ಇಲ್ಲದ ಸಮಯದಲ್ಲಿ ಮನಸ್ಸಿನ ಒತ್ತಡ ದೂರಮಾಡಿಕೊಳ್ಳಲು ಇಂತಹ ಕಲೆಯನ್ನು ರೂಢಿಸಿಕೊಂಡೆ. ನಾನು ಹಣ ವ್ಯಯವಿಲ್ಲದೇ ಮನೆಯಲ್ಲಿ ಸಿದ್ಧಪಡಿಸುವ ಇಂತಹ ಅನೇಕ ಪರಿಕರಗಳನ್ನು ನಮ್ಮ ಮನೆಗೆ ಬರುವ ನಮ್ಮ ಬಂಧುಗಳು ಒಯ್ದಿದ್ದಾರೆ. ಕೆಲವುಗಳನ್ನು ಕಾಣಿಕೆಯಾಗಿ ನೀಡಿದ್ದೇನೆ. ಇದು ನನಗೆ ಹೆಚ್ಚು ಸಂತೋಷ ನೀಡುವ ಹವ್ಯಾಸ ಎಂದರು. ಇನ್ನು ನಾರಾಯಣನ್ ಅವರ ಪತ್ನಿ ರತ್ನ ಮಾತನಾಡಿ, ನಮ್ಮ ಮನೆಯವರು ನಿವೃತ್ತಿ ಹೊಂದಿದ ನಂತರ ಇಂತಹ ಕಸೂತಿ ಕೆಲಸಗಳಿಗೆ ಹೆಚ್ಚು ತೊಡಗಿಸಿ ಕೊಂಡರು. ಏನಾದರೊಂದು ಮಾಡಬೇಕೆಂದು ಕಲ್ಪಿಸಿಕೊಂಡರೆ ಅದನ್ನು ಮಾಡಿ ಮುಗಿಸುವವರೆಗು ಅವರಿಗೆ ಸಮಾಧಾನ ಆಗುವುದಿಲ್ಲ. ಅವರಷ್ಟಕ್ಕೆ ಅವರು ಏಕಾಂಗಿಯಾಗಿ ಏನಾದರೊಂದು ಕಲಾಕೃತಿ ಮಾಡುತ್ತಿರುತ್ತಾರೆ. ಇದು ನನಗೂ ಸಂತಸ ತಂದಿದೆ ಎನ್ನುತ್ತಾರೆ. ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಗೊಂಡ ಅನೇಕ ಮಂದಿ ತಮ್ಮ ದೈನಂದಿನ ಸಮಯವನ್ನು ಕಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆದರೆ ಈ ರೀತಿ ಏನಾದರೊಂದು ಹವ್ಯಾಸಗಳನ್ನು ರೂಢಿಸಿಕೊಂಡರೆ ಸಮಯವನ್ನು ಸರಾಗವಾಗಿ ಕಳೆಯಬಹುದಾಗಿದೆ. ಜೊತೆಗೆ ಲವಲವಿಕೆಯಿಂದ ಇರಬಹುದಾಗಿದೆ.

ಯಾರಾದರೂ ಇಂತಹುದೇ ರೀತಿಯ ಕಲೆ ಕಸೂತಿಗಳನ್ನು ಕೈಗೊಳ್ಳುವುದಾದರೆ ವಿ.ಕೆ. ನಾರಾಯಣನ್ ಅವರ ಸಹಕಾರ ಅಥವ ಸಲಹೆ ಪಡೆಯಲು 99014 23711 ಗೆ ಕರೆ ಮಾಡಬಹುದು.

- ಕೆ.ಎಸ್. ಮೂರ್ತಿ