ಮಡಿಕೇರಿ, ಮಾ. 3: ಕೊಡಗು ಜಿಲ್ಲೆಯ ವಿವಿಧೆಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 25 ಮಂದಿ ಪತ್ರಕರ್ತರು ಭಾನುವಾರ ದೈನಂದಿನ ವೃತ್ತಿ ಜಂಜಾಟ ಬದಿಗಿಟ್ಟು ನಿಶಾನೆ ಬೆಟ್ಟಕ್ಕೆ ಚಾರಣ ತೆರಳಿದರು. ಬರೋಬ್ಬರಿ 30 ಕಿಲೋಮೀಟರ್ ಗಳಷ್ಟು ನಡಿಗೆ ಮೂಲಕ ಸಾಗಿ ಗಮನ ಸೆಳೆದರು. ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿಶಾನೆ ಬೆಟ್ಟ ಗಿರಿಕಂದರಗಳ ಸೊಬಗು ಸೂಜಿಗಲ್ಲಿನಂತೆ ಸೆಳೆಯುವಂತಿದೆ.

ಕೊಡಗು ಪ್ರೆಸ್‍ಕ್ಲಬ್ ಆಯೋಜಿಸಿದ ಚಾರಣವನ್ನು ವಣಚಲು ಕಾಲನಿಯಿಂದ ಪ್ರಾರಂಭಿ ಸಲಾಯಿತು. ಮಡಿಕೇರಿಯಿಂದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ತೆರಳಿದ ಪತ್ರಕರ್ತರು ಬೆಳಿಗ್ಗೆ 9 ಗಂಟೆಗೆ ನಡಿಗೆ ಪ್ರಾರಂಭಿಸಿದರು. ಮೋಡ ಮುಸುಕಿದ ವಾತಾವರಣದ ನಡುವೆ ಗಿಡ, ಮರಗಳ ನಡುವಿನ ಹಾದಿಯಲ್ಲಿ ಪತ್ರಕರ್ತರು ಸುಗಮವಾಗಿ ನಿಶಾನೆ ಬೆಟ್ಟದತ್ತ ದಾಪುಗಾಲು ಇಡುತ್ತಿದ್ದರು.

ಪ್ರತಿಯೊಂದು ಹಂತದಲ್ಲಿಯೂ ತಮ್ಮ ಕ್ಯಾಮರಾ, ಮೊಬೈಲ್‍ಗಳಲ್ಲಿ ಪ್ರಕೃತಿ ಸೊಬಗು ಸೆರೆಹಿಡಿಯುತ್ತಿದ್ದರು. ಪತ್ರಕರ್ತರೊಂದಿಗೆ ಆಗಮಿಸಿದ ನಾಲ್ವರು ಮಕ್ಕಳು ಉತ್ಸಾಹಭರಿತವಾಗಿ ಬೆಟ್ಟ ಏರಿದರು. ಮಧ್ಯಾಹ್ನ ಹೊತ್ತಿಗೆ ನಿಶಾನೆ ಬೆಟ್ಟದ ತುತ್ತ ತುದಿ ಮುಟ್ಟಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಕೂಡ ಚಾರಣದಲ್ಲಿ ಕಾಣಿಸಿಕೊಂಡರು. ಬೆಟ್ಟದ ತುದಿಯಿಂದ ನಡಿಗೆ ಮೂಲಕ ಗಾಳಿಬೀಡಿಗೆ ಆಗಮಿಸಿದರು. ಗಾಳಿಬೀಡಿನಲ್ಲಿ ಊಟೋಪಚಾರದ ಬಳಿಕ ಮತ್ತೆ ನಡಿಗೆ ಮೂಲಕ ಮಡಿಕೇರಿಯತ್ತ ಆಗಮಿಸಿದರು. 4.50 ಕ್ಕೆ ಬಸ್ ಬರುತ್ತದೆ ಎಂಬ ಕಾರಣಕ್ಕಾಗಿ ಅಷ್ಟೊತ್ತಿಗೆ ಸುಮ್ಮನ್ನೇ ಇರುವುದು ಏಕೆಂದು ಮಡಿಕೇರಿಯತ್ತ ನಡಿಗೆ ಪ್ರಾರಂಭಿಸಿದರು. ಕೆಲವರು ದಾರಿ ಮಧ್ಯದಲ್ಲಿ ಸಿಕ್ಕ ಆಟೋ, ಜೆಸಿಬಿ, ಜೀಪು, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ಮಡಿಕೇರಿಯತ್ತ ತೆರಳಿದರು. ಅಂತಿಮ ಹಂತದಲ್ಲಿ ಹಲವು ಪತ್ರಕರ್ತರು ಕೆಎಸ್‍ಆರ್‍ಟಿಸಿ ಬಸ್ ಹತ್ತಿ ಮಡಿಕೇರಿಗೆ ಆಗಮಿಸಿದರು.

ಚಾರಣದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಖಜಾಂಚಿ ರೆಜಿತ್‍ಕುಮಾರ್ ಗುಹ್ಯ, ಉಪಾಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು, ನಿರ್ದೇಶಕರಾದ ಚೀಯಂಡಿ ತೇಜಸ್ ಪಾಪಯ್ಯ, ಕಿಶೋರ್ ರೈ ಕತ್ತಲೆಕಾಡು, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಉಪಾಧ್ಯಕ್ಷ ಕೆ.ಎ. ಆದಿತ್ಯ, ನಿರ್ದೇಶಕರಾದ ಮಂಜು ಸುವರ್ಣ, ನವೀನ್ ಸುವರ್ಣ, ಪ್ರೇಮ್ ಕುಮಾರ್, ದಿವಾಕರ್ ಜಾಕಿ, ಟಿ.ಎನ್. ಮಂಜುನಾಥ್, ಹೆಚ್.ಜೆ. ರಾಕೇಶ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘ ನಿರ್ದೇಶಕ ವಿಶ್ವ ಕುಂಬೂರು, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ ನಿರ್ದೇಶಕ ಡಿ. ನಾಗೇಶ್, ಹಿರಿಯ ಪತ್ರಕರ್ತರಾದ ಎಂ.ಎನ್. ಚಂದ್ರಮೋಹನ್, ಕುಡೆಕಲ್ಲು ಸಂತೋಷ್, ಅಲ್ಲಾರಂಡ ವಿಠಲ ನಂಜಪ್ಪ ಮತ್ತಿತರರು ಪಾಲ್ಗೊಂಡಿದ್ದರು.