ವೀರಾಜಪೇಟೆ, ಮಾ 1: ಇಂದು ವೀರಾಜಪೇಟೆÉ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ 196ನೇಯ ಕಿರಣದಲ್ಲಿ “ಮಧುಮೇಹ ಖಾಯಿಲೆ-ಅರಿವು ಮತ್ತು ಪರಿಹಾರ” ಎಂಬ ವಿಷಯವಾಗಿ ಅಮೇರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲಿ ವೈದ್ಯಕೀಯ ವೃತ್ತಿ ಹೊಂದಿರುವ ಪುತ್ತೂರು ನಿವಾಸಿ ಡಾ|| ಸಂದೀಪ್ ಎಸ್.ನಾಯಕ್ ಉಪನ್ಯಾಸ ನೀಡಿದರು.

ಮಧುಮೇಹ ಖಾಯಿಲೆಯ ಕುರಿತು ಮೌಢ್ಯತೆ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಸಕ್ಕರೆ ಆಧಾರಿದ ಆಹಾರ ಪದ್ಧತಿಯನ್ನು ಗರಿಷ್ಠ ತೊರೆಯಬೇಕು. ಪ್ರಕೃತಿ ದತ್ತ ಆಹಾರ ಪದ್ಧತಿಯೆಡೆಗೆ ಸಾಗಬೇಕು. ಮೂರು ವರ್ಷಗಳ ಹಿಂದಿನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 8ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಇದು ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದರು. ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. ಸಿಂಧು ಸ್ವಾಗತಿಸಿ, ಡಾ|| ನರಸಿಂಹನ್ ವಂದಿಸಿದರು.