ಸೋಮವಾರಪೇಟೆ, ಫೆ. 29: ತಾಲೂಕಿನ ಸಿದ್ಧಲಿಂಗಪುರ-ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಪ್ರಧಾನ ಗುರುಗಳಾದ ಶ್ರೀರಾಜೇಶ್‍ನಾಥ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅರ್ಚಕರಾದ ಪರಮೇಶ್ವರ ಭಟ್, ವಾದಿರಾಜ್, ನವೀನ್ ಅವರುಗಳ ಪೌರೋಹಿತ್ವದಲ್ಲಿ ಶ್ರೀಮಂಜುನಾಥ ಸನ್ನಿಧಿಯಲ್ಲಿ ಗಣಪತಿ ಹೋಮ, ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿದವು.

ನಂತರ ಶ್ರೀನವನಾಗ ಸನ್ನಿಧಿಯಲ್ಲಿ ತಂಬಿಲ ಸೇವೆ, ಅಲಂಕಾರ ಪೂಜೆ, ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭ ಮಾತನಾಡಿದ ಪ್ರಧಾನ ಗುರುಗಳಾದ ಶ್ರೀರಾಜೇಶ್‍ನಾಥ್‍ಜೀ ಅವರು, ಕೊಡಗಿನ ಮಟ್ಟಿಗೆ ಶ್ರೀಮಂಜುನಾಥ ಸ್ವಾಮಿಯ ವಿಶೇಷ ದೇವಾಲಯ ನಿರ್ಮಾಣದ ಸಂಕಲ್ಪದ ಈಡೇರಿಕೆ ಸೇರಿದಂತೆ ಸಮಾಜದ ಸುಭೀಕ್ಷೆಗಾಗಿ ಮಾಸಿಕ ಪಂಚಮಿ ಪೂಜೆಯನ್ನು ಪ್ರತಿ ತಿಂಗಳು ಆಯೋಜಿಸಿಕೊಂಡು ಬರಲಾಗುತ್ತಿದೆ. ಜಿಲ್ಲೆ ಮಾತ್ರವಲ್ಲದೇ ಹೊರಜಿಲ್ಲೆಗಳಿಂದಲೂ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು. ಪಂಚಮಿ ಪೂಜೆಯಲ್ಲಿ ಮೋಹನ್, ಪ್ರಭಾಕರ್, ಮಣಿಕಂಠ ಸಹಕರಿಸಿದರು. ದೇವಾಲಯ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಪ್ರಕಾಶ್, ದೇವಾಲಯ ಸಮಿತಿ ಕಾರ್ಯದರ್ಶಿ ರಮೇಶ್ ಸೇರಿದಂತೆ ಇತರರು ಪೂಜೋತ್ಸವದಲ್ಲಿ ಭಾಗಿಯಾಗಿದ್ದರು.